ನವದೆಹಲಿ : ಭಾರತೀಯ ರೂಪಾಯಿ ಮತ್ತೊಂದು ದಾಖಲೆಯ ಕುಸಿತವನ್ನು ಕಂಡಿದೆ. ಈ ವಾರದ ಸೆಂಟ್ರಲ್ ಬ್ಯಾಂಕ್ ಸಭೆಗಳ ಮೇಲೆ ಮತ್ತು ಯುಎಸ್ ಫೆಡರಲ್ ರಿಸರ್ವ್ನ ಮೇಲೆ ವ್ಯಾಪಾರಿಗಳು ಗಮನಹರಿಸುವುದರಿಂದ, ರೂಪಾಯಿಯು ಮೊದಲ ಬಾರಿಗೆ ಪ್ರತಿ ಡಾಲರ್ಗೆ 80ರೂ.ಗೆ ಮುಟ್ಟಿದೆ.
ಕಚ್ಚಾತೈಲದ ಬೆಲೆ ಏರಿಕೆ, ಹೆಚ್ಚುತ್ತಿರುವ ವ್ಯಾಪಾರ ಕೊರತೆ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರ ನಿರಂತರ ಹೊರಹರಿವು ಕೆಲವು ಸಮಯದಿಂದ ರೂಪಾಯಿಯನ್ನು ಒತ್ತಡದಲ್ಲಿರಿಸಿದೆ. ಇದು ಈ ವರ್ಷ ಯುಎಸ್ ಡಾಲರ್ ವಿರುದ್ಧ ಸುಮಾರು ಶೇಕಡಾ 7 ರಷ್ಟು ಕುಸಿದಿದೆ.
ಡಿಸೆಂಬರ್ 31, 2014 ರಿಂದ ಭಾರತೀಯ ರೂಪಾಯಿ ಸುಮಾರು 25 ಪ್ರತಿಶತದಷ್ಟು ಕುಸಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 18 ರಂದು ಲೋಕಸಭೆಯಲ್ಲಿ ಹೇಳಿದರು. ರಷ್ಯಾ-ಉಕ್ರೇನ್ ಸಂಘರ್ಷ, ಕಚ್ಚಾತೈಲದ ಬೆಲೆ ಏರಿಕೆ ಮತ್ತು ಜಾಗತಿಕ ಹಣಕಾಸು ಪರಿಸ್ಥಿತಿಗಳ ಬಿಗಿತದಂತಹ ಜಾಗತಿಕ ಅಂಶಗಳು ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದ್ದರು.
ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರು 2022-23 ರಲ್ಲಿ ಇದುವರೆಗೆ ಭಾರತೀಯ ಈಕ್ವಿಟಿ ಮಾರುಕಟ್ಟೆಗಳಿಂದ ಸುಮಾರು 14 ಬಿಲಿಯನ್ ಡಾಲರ್ ಹಣವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ವಿದೇಶಿ ಪೋರ್ಟ್ಫೋಲಿಯೊ ಬಂಡವಾಳದ ಹೊರಹರಿವು ಭಾರತೀಯ ರೂಪಾಯಿಯ ಅಪಮೌಲ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.