ಚಿಕ್ಕಮಗಳೂರು : ರಾಜ್ಯದಲ್ಲಿ ಮುಲ್ಲಾ-ಖಾನ್ ವಾರ್ ತಾರಕ್ಕೇರಿದ್ದು, ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರು ಟ್ಯಾಗ್ ಮಾಡಿ ಕಾಂಗ್ರೆಸ್ ಟ್ವಿಟ್ ಮಾಡಿದ್ದ ಕಾಂಗ್ರೆಸ್ ಗೆ ಶಾಸಕ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮುಲ್ಲಾ ಎಂದು ಕರೆದರೆ ಮುಲ್ಲಾಗಳೂ ಕೂಡ ಒಪ್ಪಲ್ಲ. ನನ್ನನ್ನು ಹಿಂದು ಹುಲಿ ಅಂತಾನೇ ಕರಿಯಬೇಕು. ಯಾಕೆಂದರೆ ನಮ್ಮ ಸ್ವಭಾವಕ್ಕೆ ತಕ್ಕ ಹಾಗೆ ಹೆಸರಿಡಬೇಕು ಹೊರತು ಏನೇನೋ ಕರೆದರೆ ಆಗಲ್ಲ ಎಂದು ಹೇಳಿದ್ದಾರೆ.
ನನಗೆ ಕುಂಕುಮ ಕಂಡ್ರೆ ಆಗದೇ ಇದ್ರೆ, ಕೇಸರಿ ಕಂಡ್ರೆ ಆಗದೇ ಇದ್ರೆ, ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ರೆ ಕರೆಯಬಹುದು. ಹಾಗಿಲ್ಲದೆ ಇದ್ರೆ ಕರೆಯೋದು ಹೇಗಾಗುತ್ತದೆ. ನನ್ನನ್ನು ಹಿಂದೂ ಹುಲಿ ಅಂತಾನೆ ಕರೆಯಬೇಕು. ಮುಲ್ಲಾ ಅಂದರೆ ಮುಲ್ಲಾಗಳೇ ನನ್ನನ್ನು ಒಪ್ಪಿಕೊಳ್ಳಲ್ಲ ಎಂದಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ದತ್ತಜಯಂತಿ ಹಿನ್ನೆಲೆ ಜಿಲ್ಲೆಯ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆ ಬಸವನಹಳ್ಳಿ ಮುಖ್ಯ ರಸ್ತೆಯ ಮನೆ ಮನೆಗೆ ತೆರಳಿ ಶಾಸಕ ಸಿ.ಟಿ.ರವಿ ಭಿಕ್ಷಾಟನೆ ಮಾಡಿದ್ದಾರೆ. ಪಡಿ ಸಂಗ್ರಹಕ್ಕೆ ಮನೆಗೆ ಬಂದ ದತ್ತಮಾಲಾಧಾರಿಗಳಿಗೆ ಸಾರ್ವಜನಿಕರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವಿಳ್ಯೆದೆಲೆ ಅಡಿಕೆ -ಬೆಲ್ಲ ನೀಡಿ ಸ್ವಾಗತಿಸಿದರು. ಬುಧವಾರ ಮನೆಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿಗಳು ಗುರುವಾಋ ಇರುಮುಡಿ ರೂಪದಲ್ಲಿ ಅದನ್ನ ದತ್ತಪೀಠಕ್ಕೆ ಕೊಂಡೊಯ್ದು ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ.