ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವ್ರು ಸ್ವೀಕರಿಸಿದ ಉಡುಗೊರೆಗಳ ಇ-ಹರಾಜಿನಲ್ಲಿ ಜನರು ವ್ಯಾಪಕವಾಗಿ ಬಿಡ್ ಮಾಡುತ್ತಿದ್ದು, ಸ್ವೀಕರಿಸಿದ ಈ ಮೊತ್ತವನ್ನ ನಮಾಮಿ ಗಂಗೆ ಅಭಿಯಾನಕ್ಕೆ ಬಳಸಲಾಗುವುದು. ಇನ್ನು ಈ ಹರಾಜಿನಲ್ಲಿ ದೇಶದ ವಿವಿಧ ಭಾಗಗಳಿಂದ ಜನರು ಭಾಗವಹಿಸಿದ್ದಾರೆ ಅನ್ನೋದು ವಿಶೇಷ.
ಈ ಪೈಕಿ ಉಡುಪಿಯ ಚಾರ್ಟರ್ಡ್ ಅಕೌಂಟೆಂಟ್ ಕೆ. ರಂಗನಾಥ್ ಆಚಾರ್ ಮತ್ತು ರಾಯಪುರದ ಡಾ. ಸಂಜೀವ್ ಜೈನ್ ಅವರು ಮೋದಿಗೆ ನೀಡಿದ ಕೆಲವು ಉಡುಗೊರೆಗಳನ್ನ ಖರೀದಿಸಿದ್ದಾರೆ. “ಅವರು 2019 ರಿಂದ ಇ-ಹರಾಜಿನ ಮೂಲಕ ವಿವಿಧ ವಸ್ತುಗಳನ್ನ ಸಂಗ್ರಹಿಸುತ್ತಿದ್ದಾರೆ ಮತ್ತು ಅವರು ಇಲ್ಲಿಯವರೆಗೆ ಖರೀದಿಗಾಗಿ ಸುಮಾರು 3 ಲಕ್ಷ ರೂ.ಗಳನ್ನ ಖರ್ಚು ಮಾಡಿದ್ದಾರೆ. ಅದ್ರಂತೆ, ವಿಷ್ಣುವಿನ ವಿಗ್ರಹವನ್ನ 1.75 ಲಕ್ಷ ರೂ.ಗಳಿಗೆ ಖರೀದಿಸಿದರು” ಎನ್ನುವ ಮಾಹಿತಿ ಏಜೆನ್ಸಿ ಮೂಲಕ ವ್ಯಕ್ತವಾಗಿದೆ.
ಇ-ಹರಾಜಿಗೆ ಕಳೆದ ವರ್ಷ ಅಭೂತಪೂರ್ವ ಬೆಂಬಲ.!
ಪ್ರಧಾನಮಂತ್ರಿಗಳು ಸ್ವೀಕರಿಸಿದ ಉಡುಗೊರೆಗಳನ್ನ ದೇಶ ಮತ್ತು ವಿದೇಶಗಳಲ್ಲಿ ಇ-ಹರಾಜು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಪಡೆದ ಮೊತ್ತವನ್ನ ನದಿಯ ಪುನರುಜ್ಜೀವನಕ್ಕಾಗಿ ನೀಡಲಾಗುತ್ತಿದೆ. “ಕಳೆದ ವರ್ಷ, ಇ-ಹರಾಜಿಗೆ ಭಾರಿ ಬೆಂಬಲ ದೊರೆಯಿತು, ಜನರು ಮೂಲ ಬೆಲೆಗಿಂತ ಹೆಚ್ಚಿನ ಬಿಡ್ಡಿಂಗ್ ಮಾಡಿದ್ದರು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.