ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಬಿಡುವು ನೀಡದೆ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಅಲ್ಲಲ್ಲಿ ಹಾನಿಯಾಗಿ, ಹೊದವಾಡ-ಕೊಟ್ಟಮುಡಿಯಿಂದ ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಅರ್ಧ ಭಾಗ ಕುಸಿದಿದ್ದು, ವಾಹನ ಸಂಚಾರ ವ್ಯತ್ಯಯ ಉಂಟಾಗಿದೆ.
ಈ ರಸ್ತೆ ಸರಿಪಡಿಸುವಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮರಳು ಚೀಲ ಅಳವಡಿಸಿದ್ದು, ಭಾರಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಪರ್ಯಾಯ ಮಾರ್ಗವಾಗಿ ಹೊದವಾಡ, ಬೋಳಿಬಾನೆ ರಸ್ತೆ ಮೂಲಕ ನಾಪೋಕ್ಲು ಹಾಗೂ ಮೂರ್ನಾಡು ಮಾರ್ಗವಾಗಿ ಸಂಚರಿಸಬಹುದಾಗಿದೆ ಎಂದು ತಹಶೀಲ್ದಾರ್ ಪಿ.ಎಸ್.ಮಹೇಶ್ ಅವರು ತಿಳಿಸಿದ್ದಾರೆ.
ರಸ್ತೆ ಕುಸಿದಿರುವ ಪ್ರದೇಶಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿರುವುದರಿಂದ ಆಗಸ್ಟ್, 07 ರ ಬೆಳಗ್ಗೆ 8.30 ರವರೆಗೆ ರೆಡ್ ಅಲರ್ಟ್(204 ಮಿ.ಮೀ.ಗಿಂತ ಹೆಚ್ಚು ಮಳೆ)ನ್ನು ಹವಾಮಾನ ಇಲಾಖೆ ಘೋಷಿಸಿದೆ.
ಸಂಪಾಜೆ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದರಿಂದ ಸಂಪಾಜೆ ಗ್ರಾ.ಪಂ.ನಲ್ಲಿ ತುರ್ತು ಕಾರ್ಯಪಡೆ ಸಭೆ ನಡೆದಿದೆ. ಸಂಪಾಜೆ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವಲ್ಲಿ ಹಲವು ಸಲಹೆ, ಮಾರ್ಗದರ್ಶನ ಮಾಡಲಾಗಿದೆ.
ಅಪಾಯದ ಅಂಚಿನಲ್ಲಿರುವ ಮರಳನ್ನು ತೆರವುಗೊಳಿಸುವುದು, ಪೈಪ್ಲೈನ್ ಹಾಳಾಗಿರುವುದನ್ನು ಸರಿಪಡಿಸುವುದು, ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವುದು, ಸಂಬಂಧಿಕರ ಮನೆಗೆ ತೆರಳುವವರಿಗೆ ಆಹಾರ ಕಿಟ್ ವಿತರಿಸುವುದು, ಪರಿಹಾರ ಕೇಂದ್ರದಲ್ಲಿ ಹೆಚ್ಚಿನ ಆರೋಗ್ಯ ಸೇವೆ ಕಲ್ಪಿಸುವುದು ಮತ್ತಿತರ ಬಗ್ಗೆ ಚರ್ಚೆ ನಡೆಯಿತು.
ತಾ.ಪಂ.ಆಡಳಿತಾಧಿಕಾರಿ ಶಬಾನಾ ಎಂ.ಷೇಖ್, ನೋಡಲ್ ಅಧಿಕಾರಿ ಹೇಮಂತ್ ಕುಮಾರ್, ಗ್ರಾ.ಪಂ.ಅಧ್ಯಕ್ಷರು, ಗ್ರಾ.ಪಂ. ಪಿಡಿಒ, ಕಂದಾಯ ನಿರೀಕ್ಷಕರಾದ ವೆಂಕಟೇಶ್, ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇತರರು ಇದ್ದರು.