ಕೊಪ್ಪಳ : ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 5ರಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮವು ಸುವ್ಯವಸ್ಥಿತವಾಗಿ ನಡೆಯಿತು. ಕಣ್ಣುಹಾಯಿಸಿದೆಲ್ಲೆಡೆ ಕೇಸರಿ ವಸ್ತ್ರಧಾರಿ ಭಕ್ತಗಣವೇ ಕಂಡು ಬಂದಿತು.
ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮತ್ತು ಇನ್ನೀತರ ಕಡೆಗಳಿಂದ ಶ್ರೀ ಆಂಜನೇಯ ಜನ್ಮಭೂಮಿ ಐತಿಹ್ಯದ ಅಂಜನಾದ್ರಿ ಪರ್ವತದ ಸ್ಥಳಕ್ಕೆ ಲಕ್ಷಕ್ಕಿಂತ ಹೆಚ್ಚು ಜನ ಭಕ್ತರು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು. ಆಂಜನೇಯ ದೇವರ ದರ್ಶನ ಪಡೆದರು.
ಹನುಮಮಾಲಾ ಅಭಿಯಾನವನ್ನು ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡು ಉಪವಿಭಾಧಿಕಾರಿಗಳ ನೇತೃತ್ವದಲ್ಲಿ 14 ಸಮಿತಿಗಳನ್ನು ರಚಿಸಿತ್ತು. ನಾನಾ ಸಮಿತಿಗಳಡಿ ಸುಮಾರು 50ಕ್ಕಿಂತ ಹೆಚ್ಚು ಜನ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯಿಂದ 50 ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಪೊಲೀಸ್ ಇಲಾಖೆಯು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರ ನೇತೃತ್ವದಲ್ಲಿ ಒಬ್ಬರು ಎಎಸ್ಪಿ, 6 ಡಿವೈಎಸ್ಪಿ, 18 ಪಿಐ, 70 ಪಿಎಸ್ಐ ಸೇರಿದಂತೆ 900 ಪೊಲೀಸ್ ಸಿಬ್ಬಂದಿ ಮತ್ತು 800 ಹೋಮ್ ಗಾರ್ಡ್ಸ್ಗಳು ಕರ್ತವ್ಯ ನಿರ್ವಹಿಸಿದರು. ಎಸ್ಡಿಆರ್ಎಫ್ನ ಒಂದು ತಂಡ, ಇನ್ನೀತರ ನೌಕರ ವರ್ಗದವರು, ಪೌರಕಾರ್ಮಿಕರು ಸಹ ಕಾರ್ಯನಿರ್ವಹಿಸಿದರು.
ಹನುಮಮಾಲಾ ಅಭಿಯಾನ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವಿತರಣೆಗೆ ಸಹ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಇಲಾಖೆಯಿಂದ ಹನುಮಮಾಲಾ ಭಕ್ತರಿಂದ ರಕ್ತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗಿತ್ತು.
ಜಿಲ್ಲಾಧಿಕಾರಿಗಳ ಭೇಟಿ: ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಡಿಸೆಂಬರ್ 5ರಂದು ಸಹ ಅಂಜನಾದ್ರಿಗೆ ಭೇಟಿ ನೀಡಿ ಹನುಮಮಾಲಾ ಅಭಿಯಾನದ ಹಿನ್ನೆಲೆಯ ಮೂಲಭೂತ ಸೌಕರ್ಯಗಳನ್ನು ಖುದ್ದು ಪರಿಶೀಲಿಸಿದರು. ಊಟದ ಕೌಂಟರ್ ಸ್ಥಳಕ್ಕೆ ಸಹ ಭೇಟಿ ನೀಡಿ ಹುಗ್ಗಿ ಸವಿದು ಆಹಾರದ ರುಚಿ ಮತ್ತು ಸರಬರಾಜು ವ್ಯವಸ್ಥೆಯನ್ನು ಪರಿಶೀಲಿಸಿದರು. ಮಾಲಾ ವಿಸರ್ಜನೆಗೆ ಆಗಮಿಸಿದ ಲಕ್ಷಾಂತರ ಭಕ್ತರು ಹುಗ್ಗಿ, ಅನ್ನ ಮತ್ತು ಸಾಂಬಾರ ಸವಿದು ಸಂತಸ ವ್ಯಕ್ತಪಡಿಸಿದರು.
ರಾತ್ರಿಯಿಂದಲೇ ಪ್ರಸಾದ ವ್ಯವಸ್ಥೆ: ಡಿಸೆಂಬರ್ 5ರ ಬೆಳಗ್ಗೆ 4 ಗಂಟೆಯಿಂದಲೇ ಭಕ್ತರಿಗೆ ಪ್ರಸಾದ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಉಪ್ಪಿಟ್ಟು ಮತ್ತು ಸೀರಾ ನೀಡಲಾಯಿತು. ಡಿಸೆಂಬರ್ 4ರ ರಾತ್ರಿ ಅಂಜನಾದ್ರಿ ಪರ್ವತದ ಸ್ಥಳಕ್ಕೆ ಆಗಮಿಸಿದ 25,000 ಭಕ್ತರಿಗೆ ಸಹ ಅವರಿದ್ದ ಸ್ಥಳಕ್ಕೆ ಸಂಚರಿಸಿ ಊಟದ ವಿತರಣೆ ಮಾಡಲಾಯಿತು.
17 ಸ್ಥಳಗಳಲ್ಲಿ ಪಾರ್ಕಿಂಗ್: ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಹನುಮನ ಹಳ್ಳಿ ಮತ್ತು ಗಂಗಾವತಿ ರಸ್ತೆ ಸೇರಿದಂತೆ ಇನ್ನೀತರ 17 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖ ರಸ್ತೆಗಳು, ಅಂಜನಾದ್ರಿ ಪರ್ವತದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿಗಳನ್ನು ಅಳವಡಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ನಿಗಾ ಇಡಲಾಗಿತ್ತು.
1.20 ಲಕ್ಷ ಲಡ್ಡು: ಹನುಮಮಾಲ ವಿಸರ್ಜನೆ ಕಾರ್ಯಕ್ರಮದ ಪ್ರಯುಕ್ತ ಲಡ್ಡು, ತೀರ್ಥದ ಬಾಟಲಿ ವಿತರಣೆಗೆ ಸಹ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದಿಂದ ಇಳಿದು ಬರುತ್ತಿದ್ದ ಭಕ್ತರು ಊಟದ ಕೌಂಟರನತ್ತ ಸಾಗಿ ಪ್ರಸಾದ ಸ್ವೀಕರಿಸಿ ಲಡ್ಡು ತೀರ್ಥದ ಬಾಟಲಿ ಖರೀದಿಸಿ ಸಾಗಿದರು.