ನವದೆಹಲಿ : ಟೋಲ್ ಪ್ಲಾಜಾಗಳ ಬಳಿ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನೀತಿಯನ್ನ ತರಲು ಹೊರಟಿದೆ. FASTAG ಬದಲಿಗೆ GPS ವ್ಯವಸ್ಥೆಯನ್ನ ಅಳವಡಿಸುವ ಪ್ರಸ್ತಾವನೆಯನ್ನು ಪರಿಗಣಿಸಲಾಗುತ್ತಿದೆ. ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ವ್ಯವಸ್ಥೆ ಕೆಲಸ ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೂಲಕ ಟೋಲ್ ಪ್ಲಾಜಾಗಳ ಬಳಿ ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಟೋಲ್ ಅನ್ವಯವಾಗುವ ಹೆದ್ದಾರಿಗಳಲ್ಲಿ ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಟೋಲ್ ಮೊತ್ತ ಪಾವತಿಸಬಹುದು ಎಂದು ಹೇಳಿದರು. ಇದರಿಂದಾಗಿ ಟೋಲ್ ಗೇಟ್ಗಳ ಬಳಿ ಕಾಯುವ ಅಗತ್ಯವಿಲ್ಲ.
2018-19ರಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸರಾಸರಿ ಕಾಯುವ ಸಮಯ 8 ನಿಮಿಷಗಳು ಎಂದು ಗಡ್ಕರಿ ಹೇಳಿದರು. ಕಾಯುವ ಸಮಯ ಗಣನೀಯವಾಗಿ ಕಡಿಮೆಯಾದರೂ ಜನನಿಬಿಡ ಪ್ರದೇಶಗಳಲ್ಲಿ ನಿರ್ದಿಷ್ಟ ಸಮಯಗಳಲ್ಲಿ ವಾಹನ ದಟ್ಟಣೆ ಇರುತ್ತದೆ ಎಂದುರ. ಈ ಹಿನ್ನೆಲೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಈಗಿರುವ 4 ಪಥದ ಹೆದ್ದಾರಿಗಳಲ್ಲಿ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು. ಸದ್ಯದಲ್ಲೇ ನಂಬರ್ ಪ್ಲೇಟ್ ತಂತ್ರಜ್ಞಾನ ಆರಂಭಿಸಲಾಗುವುದು ಎಂದರು. ಮತ್ತೊಂದೆಡೆ, ಈಗಾಗಲೇ ಪರಿಚಯಿಸಲಾದ ಫಾಸ್ಟ್ಯಾಗ್ಗಳೊಂದಿಗೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ಆದಾಯವು ವರ್ಷಕ್ಕೆ 15 ಸಾವಿರ ಕೋಟಿಗಳಷ್ಟು ಹೆಚ್ಚಾಗಿದೆ ಎಂದು ಗಡ್ಕರಿ ಬಹಿರಂಗಪಡಿಸಿದರು. ಹೊಸದಾಗಿ ಪರಿಚಯಿಸಿರುವ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾ ತಂತ್ರಜ್ಞಾನ ರಸ್ತೆಯಲ್ಲಿ ಬಳಸುವ ದೂರಕ್ಕೆ ಅನುಗುಣವಾಗಿ ಹಣ ಪಾವತಿಸಲು ಅನುಕೂಲವಾಗಲಿದೆ ಎಂದರು.