ಬೆಂಗಳೂರು: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ ಪ್ಯಾಕೇಜ್ ಟೂರ್ ಗೆ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಯೋಜನೆಯ ಮೊದಲ ರೈಲು ನವೆಂಬರ್ 11 ರಂದು ಬೆಂಗಳೂರಿನಿಂದ ಹೊರಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಚಾಲನೆ ನೀಡುವ ನಿಟ್ಟಿನಲ್ಲಿ ಯೋಜಿಸಲಾಗುತ್ತಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.
BREAKING NEWS : ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮಹತ್ವಾಕಾಂಕ್ಷಿ ಯೋಜನೆಯ ಬುಕ್ಕಿಂಗ್ ಪ್ರಾರಂಭವಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಮರು ನಿರ್ಮಾಣವಾಗಿರುವ ʼದಿವ್ಯ ಕಾಶಿ – ಭವ್ಯಕಾಶಿʼ ಯನ್ನ ರಾಜ್ಯದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಕಾಶಿ ವಿಶ್ವನಾಥನ ದರ್ಶನ ಪಡೆಯಲಿ ಎನ್ನುವ ಉದ್ದೇಶದಿಂದ ಈ ವಿಶೇಷ ಪ್ಯಾಕೇಜ್ ಟೂರನ್ನು ಆಯೋಜಿಸಲಾಗಿದೆ. ಕೇಂದ್ರ ಸರಕಾರದ ಭಾರತ್ ಗೌರವ್ ಯೋಜನೆಯ ಅಡಿಯಲ್ಲಿ ರೈಲನ್ನು ಮುಜರಾಯಿ ಇಲಾಖೆ ಗುತ್ತಿಗೆಗೆ ಪಡೆದು ಈ ಯೋಜನೆ ಕಾರ್ಯತಗೊಳಿಸುತ್ತಿದ್ದಾರೆ. ಕೇಂದ್ರ ರೈಲ್ವೇ ಸಚಿವರ ಸಂಪೂರ್ಣ ಸಹಕಾರದೊಂದಿಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಮೊದಲ ರೈಲು ನವೆಂಬರ್ 11 ರಂದು ಬೆಂಗಳೂರಿನಿಂದ ಹೊರಡಲಿದೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲೂ ರೈಲು ಹತ್ತುವ ಅವಕಾಶ
ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಹತ್ತಲು ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಬೆಂಗಳೂರು, ಬಿರೂರ್, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗರಾಜ್ ಗೆ ಸಂಚರಿಸಲಿದೆ.
ಐಆರ್ಸಿಟಿಸಿ ಸಹಭಾಗಿತ್ವದಲ್ಲಿ ಎಲ್ಲ ವಿಶೇಷ ಪ್ಯಾಕೇಜ್
ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯ ರಾಮಲಲ್ಲಾ ದೈವ ಭೂಮಿಯ ವೈಭವ ಸವಿಯುವ ಅವಕಾಶ ಇದಾಗಿದೆ. 8 ದಿನಗಳ ಕಾಲದ ಈ ಟೂರ್ ಪ್ಯಾಕೇಜ್ನಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡಿರಲಿದೆ. ಟ್ರೈನ್ ದರ, ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್ ವ್ಯವಸ್ಥೆ, ಉಳಿದುಕೊಳ್ಳಲು ಹೋಟೇಲ್, ಮತ್ತು 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ಪ್ಯಾಕೇಜ್ ಒಳಗೊಂಡಿರಲಿದೆ.
ಕರ್ನಾಟಕ ಸರಕಾರದಿಂದ 5 ಸಾವಿರ ರೂಪಾಯಿಗಳ ಸಹಾಯಧನ
ಐಆರ್ಸಿಟಿಸಿ ಸಹಭಾಗಿತ್ವದ ಈ ಟೂರ್ ಪ್ಯಾಕೇಜ್ ತಗೆದುಕೊಳ್ಳುವ ಪ್ರತಿ ವ್ಯಕ್ತಿಗೂ 5 ಸಾವಿರ ರೂಪಾಯಿಗಳ ಸಹಾಯಧನವನ್ನ ಕರ್ನಾಟಕ ಸರಕಾರ ನೀಡಲಿದೆ. ಈ ಪ್ಯಾಕೇಜ್ ನ ದರ ಮೂಲತಃ 20 ಸಾವಿರ ರೂಪಾಯಿಗಳಾಗಿದ್ದು, ಪ್ರಯಾಣಿಕರು ಕೇವಲ 15,000 ರೂಪಾಯಿಗಳನ್ನು ನೀಡಿದರೆ ಸಾಕು. ಉಳಿದ 5000 ರೂಗಳನ್ನು ಕರ್ನಾಟಕ ಸರಕಾರ ಸಹಾಯಧನದ ರೂಪದಲ್ಲಿ ನೀಡಲಿದೆ.
ಮಹತ್ವಾಕಾಂಕ್ಷಿ ಯೋಜನೆಯ ಬುಕ್ಕಿಂಗ್ ಈಗಾಗಲೇ ಪ್ರಾರಂಭ
ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ ರೈಲು ಯೋಜನೆಯ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಐಆರ್ಸಿಟಿಸಿ ಹಾಗೂ ಐಟಿಎಂಎಸ್ ವೆಬ್ಸೈಟ್ ಗಳ ಮೂಲಕ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದ್ದು, ಈಗಾಗಲೇ ಹಲವಾರು ಜನರು ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಈ ಲಿಂಕ್ ಗಳ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.
https://www.irctctourism.com/pacakage_description?packageCode=SZKBG01
http://itms.kar.nic.in/hrcehome/index.php