ಬೆಂಗಳೂರು : ಮುಖ್ಯಮಂತ್ರಿಗಳ ಕಚೇರಿಯಿಂದ ಕೆಲವು ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂಪಾಯಿ ನಗದು ಉಡುಗೊರೆ ನೀಡಿರುವ ಆರೋಪದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಸುಳ್ಳನ್ನೇ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದೆ. ಪತ್ರಕರ್ತರಿಗೆ ಗಿಫ್ಟ್ ಕೊಡಿ ಎಂದು ನಾನು ಯಾರಿಗೂ ಸೂಚಿಸಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಪತ್ರಕರ್ತರಿಗೆ ಐಫೋನ್, ಚಿನ್ನದ ನಾಣ್ಯ ನೀಡಿದ್ದರು. ಈಗ ಆರೋಪ ಮಾಡಲು ಕಾಂಗ್ರೆಸ್ ಗೆ ಯಾವ ನೈತಿಕತೆ ಇದೆ. ಪತ್ರಕರ್ತರಿಗೆ ಹಣ ನೀಡಿದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಲೋಕಾಯುಕ್ತ ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ ಎಂದರು.
ರಾಜಕೀಯ ವರದಿಗಾರಿಕೆ ವಿಭಾಗದಲ್ಲಿರುವ ಕೆಲವು ಹಿರಿಯ ಪತ್ರಕರ್ತರು ತಮಗೆ ಅ.22 ರಂದು ಹಬ್ಬದ ಉಡುಗೊರೆ ಬಾಕ್ಸ್ ಗಳಲ್ಲಿ ಸಿಹಿ ಹಾಗೂ ಡ್ರೈ ಫ್ರೂಟ್ಸ್ ಇರುವ ಬಾಕ್ಸ್ ಗಳು ಹಾಗೂ ಒಂದು ಲಕ್ಷ ರೂಪಾಯಿ ನಗದು ಇರುವ ಲಕೋಟೆ ಬಂದಿತ್ತು ಎಂದು ಕಾಂಗ್ರೆಸ್ ಆರೋಪಿಸಿತ್ತು.