ನವದೆಹಲಿ : ದೇಶದ ರೈತರಿಗೆ ಕೇಂದ್ರ ಸರ್ಕಾರ ದೀಪಾವಳಿ ಗಿಫ್ಟ್ ನೀಡಿದ್ದು, ಅಕ್ಟೋಬರ್ 17 ರ ಇಂದು ಭಾರತ್ ಬ್ರಾಂಡ್ ಯೂರಿಯಾಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಇನ್ನು ಇದೇ ವೇಳೆ ಪಿಎಂ ಕಿಸಾನ್ ಯೋಜನೆಯಡಿ 12ನೇ ಕಂತು ಬಿಡುಗಡೆ ಮಾಡಲಿದ್ದಾರೆ.
‘ಒಂದು ರಾಷ್ಟ್ರ, ಒಂದು ರಸಗೊಬ್ಬರ’ ಯೋಜನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ್’ ಎಂಬ ಒಂದೇ ಬ್ರಾಂಡ್ ಅಡಿಯಲ್ಲಿ ಸಬ್ಸಿಡಿಯ ಯೂರಿಯಾ ಚೀಲಗಳನ್ನ ಬಿಡುಗಡೆ ಮಾಡಲಿದ್ದಾರೆ. ಇನ್ನು ಅಕ್ಟೋಬರ್ 17 ರಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರಾರಂಭವಾಗುವ ಎರಡು ದಿನಗಳ ಕಾರ್ಯಕ್ರಮದಲ್ಲಿ 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ.
ಇನ್ನು ಪೂಸಾ ಕಾಂಪ್ಲೆಕ್ಸ್ನ ಮೇಳ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಪಿಎಂ-ಕಿಸಾನ್ ಯೋಜನೆಯ ಭಾಗವಾಗಿ 8.5 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 16,000 ಕೋಟಿ ರೂ.ಗಳನ್ನು ವಿದ್ಯುನ್ಮಾನವಾಗಿ ವರ್ಗಾಯಿಸಲಾಗುವುದು.
ಕೃಷಿ ಮತ್ತು ರಸಗೊಬ್ಬರ ಸಚಿವಾಲಯಗಳು ಜಂಟಿಯಾಗಿ ಆಯೋಜಿಸಿರುವ ‘ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022’ ಕಾರ್ಯಕ್ರಮದಲ್ಲಿ ‘ಇಂಡಿಯನ್ ಎಡ್ಜ್’ ಎಂಬ ಅಂತರರಾಷ್ಟ್ರೀಯ ಸಾಪ್ತಾಹಿಕ ರಸಗೊಬ್ಬರ ಇ-ನಿಯತಕಾಲಿಕವನ್ನ ಪ್ರಧಾನಿ ಅನಾವರಣಗೊಳಿಸಲಿದ್ದಾರೆ ಮತ್ತು ಕೃಷಿ-ಸ್ಟಾರ್ಟ್ಅಪ್ ಸಮಾವೇಶ ಮತ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ರಸಗೊಬ್ಬರ ಕ್ಷೇತ್ರದಲ್ಲಿನ ಅತಿದೊಡ್ಡ ಕ್ರಮದಲ್ಲಿ, ಎಲ್ಲಾ ಸಬ್ಸಿಡಿ ಮಣ್ಣಿನ ಪೋಷಕಾಂಶಗಳಾದ ಯೂರಿಯಾ, ಡಿ-ಅಮೋನಿಯಂ ಫಾಸ್ಫೇಟ್ (DAP), ಮ್ಯೂರಿಯಟ್ ಆಫ್ ಪೊಟ್ಯಾಶ್ (MoP) ಮತ್ತು ಎನ್ಪಿಕೆ – ದೇಶಾದ್ಯಂತ ಒಂದೇ ಬ್ರಾಂಡ್ ‘ಭಾರತ್’ ಅಡಿಯಲ್ಲಿ ಮಾರಾಟ ಮಾಡಲಾಗುವುದು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸುದ್ದಿಗಾರರಿಗೆ ತಿಳಿಸಿದರು.