ಬೆಂಗಳೂರು : ಮುಂದಿನ ವರ್ಷದ ಮಾರ್ಚ್ ವೇಳೆಗೆ ಕನಿಷ್ಠ ಒಂದು ಕೋರ್ಸ್ ಅನ್ನು ಆನ್ ಲೈನ್ ಮೂಲಕ ಪ್ರಾರಂಭಿಸುವಂತೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ ಅವರು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ್ದಾರೆ.
ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಭಿವೃದ್ಧಿ ಜೀವನೋಪಾಯ ಇಲಾಖೆಗಳಲ್ಲಿ (ಡಿಸೆಂಬರ್ 1 ರಿಂದ 31) ಸುಶಾಸನ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಲ್ಲಿ ಆನ್ಲೈನ್ ಡಿಜಿಟಲ್ ಕಲಿಕಾ ಕೋರ್ಸ್ಗಳನ್ನು ಪರಿಚಯಿಸಲಾಗುವುದು. ಅದರಂತೆ, ಪ್ರತಿ ವಿಶ್ವವಿದ್ಯಾಲಯವು ಮಾರ್ಚ್ 2023 ರ ಮೊದಲು ಆನ್ಲೈನ್ ಸ್ವರೂಪದಲ್ಲಿ ಕನಿಷ್ಠ ಒಂದು ಪದವಿ ಕೋರ್ಸ್ ಅನ್ನು ಹೊಂದಿರಬೇಕು. ಡಿಸೆಂಬರ್ ಅಂತ್ಯದೊಳಗೆ ಪ್ರತಿಯೊಂದು ವಿಶ್ವವಿದ್ಯಾಲಯವು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮುಂದಿನ ಮೂರು ತಿಂಗಳಲ್ಲಿ ವಿಶ್ವವಿದ್ಯಾಲಯಗಳು ಕನಿಷ್ಠ ಐದು ಉದ್ಯಮ ಪಾಲುದಾರರೊಂದಿಗೆ ತಿಳುವಳಿಕಾ ಒಡಂಬಡಿಕೆಗಳನ್ನು ಮಾಡಿಕೊಳ್ಳಬೇಕಾಗಿದೆ. ಐಟಿಐಗಳ ಮಾರ್ಕ್ಸ್ ಕಾರ್ಡ್ ಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಒಟ್ಟು 60,000 ಐಟಿಐ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ನಿಂದ ಅತ್ಯುತ್ತಮ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.