ಬಾದಾಮಿ : ರಾಜ್ಯದ 18 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಈವರೆಗೂ ಯಾವುದೇ ಪರಿಹಾರ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ನೆರೆಯಿಂದ ಸಂಕಷ್ಟದಲ್ಲಿದ್ದಾರೆ. ಇದು ಸಂಭ್ರಮದ ಸಮಯನಾ? ಜನರಿಗೆ ಸ್ಪಂದಿಸಿದರೆ ಅಲ್ವಾ ಜನಸ್ಪಂದನಾ. ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರಾ?ಸಚಿವರು ಕೇವಲ ಧ್ವಜಾರೋಹಣ ಮಾಡಲಷ್ಟೇ ಸೀಮಿತ ಎಂದು ಕಿಡಿಕಾರಿದ್ದಾರೆ.
ಜನರು ಈಗಾಗಲೇ ಅವರ ಧಮ್ ನೋಡಿದ್ದಾರೆ. ಬೆಂಗಳೂರಿನ ಪರಿಸ್ಥಿತಿ ನೋಡಿದ್ರೆ ಇವರ ಧಮ್ ಗೊತ್ತಾಗುತ್ತದೆ. ಖಾಲಿ ಕುರ್ಚಿ ಎದುರು ವೀರಾವೇಶದಿಂದ ಮಾತನಾಡಿದ್ದಾರೆ. ನಿನ್ನೆ ಎಲ್ಲರೂ ನನ್ನ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ನನ್ನ ಮೇಲಿನ ಭಯದಿಂದ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ದಾವಣಗೆರೆ ಕಾರ್ಯಕ್ರಮದ ಬಳಿಕ ಬಿಜೆಪಿಯವರಿಗೆ ಹತಾಶೆ ಶುರುವಾಗಿದೆ. ಯಾರು ಅಧಿಕಾರಕ್ಕೆ ಬರಬೇಕು ಎಂಬುದು ಜನರು ನಿರ್ಧರಿಸುತ್ತಾರೆ. ಧಮ್, ತಾಕತ್ತು ಯಾರಿಗೆ ಇದೆ ಎಂದು ಜನರು ತೀರ್ಮಾನಿಸುತ್ತಾರೆ. ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪರ ಅಲೆ ಶುರುವಾಗಿದೆ ಎಂದರು.