ಮೈಸೂರು : ಸೆ.26 ರ ಇಂದು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ( Mysore Dasara 2022) ಉದ್ಘಾಟನೆಯಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಬೆಳಿಗ್ಗೆ 9 ಗಂಟೆ 45 ನಿಮಿಷದಿಂದ 10 ಗಂಟೆ 5 ನಿಮಿಷದೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
ಮೈಸೂರು ಅರಮನೆಯಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ. ಇಂದು ರಾಜವಂಶಸ್ಥ ಯದುವೀರ್ ಖಾಸಗಿ ದರ್ಬಾರ್ ಹಾಲ್ನಲ್ಲಿ ಬೆಳಿಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬೆಳಗ್ಗೆ 6.15ಕ್ಕೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತೆ. ಬೆಳಗ್ಗೆ 9.45ಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಕಂಕಣಧಾರಣೆ. 10.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸುತ್ತೆ. 11.15ಕ್ಕೆ ಸಿಂಹಾರೋಹಣ ಪೂಜಾ ಕೈಂಕರ್ಯ. ಕಳಸ ಪೂಜೆ ಜೊತೆಗೆ ವಿವಿಧ ಪೂಜೆಗಳು ನೆರವೇರುತ್ತವೆ
ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆಯಿಂದ 11.30ರವರೆಗೆ ಸಾರ್ವಜನಿಕರಿಗೆ ಚಾಮುಂಡೇಶ್ವರಿ ದೇವಸ್ಧಾನದಲ್ಲಿ ದೇವರ ದರ್ಶನ ಸಿಗುವುದಿಲ್ಲ. ಕಾರ್ಯಕ್ರಮ ಮುಗಿದ ನಂತರ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ.
ಈ ಹಿನ್ನೆಲೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದರು.
ಮೈಸೂರು ನಗರ ಅಧಿಕಾರಿ ಸೇರಿದಂತೆ ಹೊರ ಜಿಲ್ಲೆಗಳಿಂದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮೈಸೂರು ನಗರ ದಿಂದ 1255, ಹೊರ ಜಿಲ್ಲೆಗಳಿಂದ 3580 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು , 650 ಗೃಹ ರಕ್ಷಕ ಸಿಬ್ಬಂದಿಗಳು ಸೇರಿ ಒಟ್ಟು 5485 ಮಂದಿ ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.