ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟಿಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಪವಿತ್ರ ಮೃತ್ತಿಕೆ(ಮಣ್ಣು) ಮತ್ತು ಜಲವನ್ನು ಸಂಗ್ರಹಿಸುವ ವಿಶಿಷ್ಟ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದರು.
ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆ ಅಭಿಯಾನಕ್ಕೆ ಚಾಲನೆ ನೀಡಿ ಹಾಗೂ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
BIGG NEWS : ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ : ಸೆ. 7 ರೊಳಗೆ ಪಿ.ಎಂ.ಕಿಸಾನ್ ನೋಂದಾಯಿತ ರೈತರು ಇ-ಕೆವೈಸಿ ಮಾಡಿಸಿ
ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ರಾಜ್ಯ ಸರಕಾರದಿಂದ ವಿಧಾನಸೌಧದ ಆವರಣದಲ್ಲೂ 50 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಜೊತೆಗೆ ಲಾಲ್ಬಾಗ್ ಆವರಣದಲ್ಲೂ ನಾಡಪ್ರಭುವಿನ ಪ್ರತಿಮೆ ಮೈದೆಳೆಯಲಿದೆ ಎಂದು ಘೋಷಿಸಿದರು.
ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್ ಪಾರ್ಕ್ ಸ್ಥಾಪನೆಗಾಗಿ ಸರಕಾರವು 84 ಕೋಟಿ ರೂ. ವಿನಿಯೋಗಿಸುತ್ತಿದೆ. ಹೊರ ದೇಶದಿಂದ ಬರುವ ವಿದೇಶಿ ಪ್ರವಾಸಿಗರಿಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನಾಡಪ್ರಭು ಕೆಂಪೇಗೌಡರ ಆಶಯಗಳನ್ನು ಸಂಕೇತಿಸುವಂತೆ “ಪ್ರಗತಿಯ ಪ್ರತಿಮೆ” (Statue of Prosperity) ಎಂದು ನಾಮಕರಣ ಮಾಡಲಾಗುತ್ತಿದೆ ಎಂದು ನುಡಿದ ಅವರು ಸಂಸ್ಕೃತಿ ಮತ್ತು ಶ್ರೀಮಂತಿಕೆಯ ಪ್ರತಿರೂಪ ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯ ಉದ್ಘಾಟನಾ ಅಭಿಯಾನವು ಸಾಂಕೇತಿಕವಾಗಿ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ, ಪ್ರತಿಮೆ’ಯನ್ನು ಉದ್ಘಾಟಿಸಿ ಲೋಕಾರ್ಪಣೆಗೆ ಕ್ರಮವಹಿಸಲಾಗುವುದು. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಇಂದು ಹೆಸರು ಗಳಿಸಲು ಕೆಂಪೇಗೌಡರೇ ಮೂಲಕಾರಣ. ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯ ಉದ್ಘಾಟನೆಯ ಪೂರ್ವವಾಗಿ ರಾಜ್ಯ ಸರಕಾರವು 45 ದಿನಗಳ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದ ಅವರು ಅಭಿಯಾನವು ರಾಜ್ಯದ ಎಲ್ಲರನ್ನೂ ಒಳಗೊಳ್ಳಲಿದ್ದು, ನವ ಕರ್ನಾಟಕ ನಿರ್ಮಾಣದ ದೊಡ್ಡ ಹೆಜ್ಜೆಯಾಗಿದೆ. ಇದು ಸರಕಾರದ ಸಮಗ್ರ ಅಭಿವೃದ್ಧಿ ಸಂಕಲ್ಪದ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದರು.
ಉನ್ನತ ಶಿಕ್ಷಣ ಸಚಿವರು ಮತ್ತು ನಾಡಪ್ರಭು ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ತಾಣಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾತನಾಡಿ, ಬೆಂಗಳೂರಿನ ಇಂದಿನ ಕೀರ್ತಿಗೆ ಈ ನಗರಕ್ಕೆ ಬುನಾದಿ ಹಾಕಿದ ಕೆಂಪೇಗೌಡರೇ ಕಾರಣ. ಅವರ ಪ್ರತಿಮೆ ಉದ್ಘಾಟನೆಗೆ ಪೂರ್ವಭಾವಿಯಾಗಿ ಇಂದಿನಿಂದ 45 ದಿನಗಳ ಕಾಲ ರಾಜ್ಯ ಮಟ್ಟದ ಅಭಿಯಾನ ನಡೆಯಲಿದೆ. ಇದರ ಅಂಗವಾಗಿ ಎಲ್ಲ ಹಳ್ಳಿಗಳ ವ್ಯಾಪ್ತಿಯ ಕೆರೆಕಟ್ಟೆಗಳು ಮತ್ತು ನದಿಗಳಿಂದ ಪವಿತ್ರವಾದ ಮಣ್ಣು ಮತ್ತು ಜಲ ಸಂಗ್ರಹಿಸಲಾಗುವುದು. ಬಳಿಕ ಪ್ರಧಾನಿ ಮೋದಿ ಅವರು ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ.
ಕೆಂಪೇಗೌಡರು ದೂರದೃಷ್ಟಿ ಹೊಂದಿದ ನಾಯಕರಾಗಿದ್ದರು. ಅವರಿಂದ ಬೆಂಗಳೂರು ಸುರಕ್ಷಿತ ಮತ್ತು ಸುಭದ್ರವಾಗಿದೆ. ಅಂತಹ ಮಹಾಪುರುಷನ ನೆನಪನ್ನು ರಾಜ್ಯ ಸರಕಾರ ಅಜರಾಮರಗೊಳಿಸುತ್ತಿದೆ. ಅಭಿಯಾನದ ಅಂಗವಾಗಿ 31 ಜಿಲ್ಲೆಗಳಿಗೂ ತಲಾ ಒಂದು ಎಲ್ಇಡಿ ಅಲಂಕೃತ ವಾಹನ ಸಂಚರಿಸಲಿದೆ. ಇದರಲ್ಲಿ ಪುಣ್ಯಪುರುಷರ ಸಂದೇಶಗಳು ಇರಲಿದ್ದು, ಕೆಂಪೇಗೌಡರ ಕುರಿತ ಸಾಕ್ಷ್ಯಚಿತ್ರ ಪ್ರಸಾರವೂ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.
23 ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿಯು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಕಾಮಗಾರಿ ಒಂಬತ್ತು ತಿಂಗಳಲ್ಲಿ ಮುಗಿಯಲಿದೆ. ಒಟ್ಟು 30 ಕೋಟಿ ರೂ. ವೆಚ್ಚದ ಥೀಮ್ ಪಾರ್ಕ್, ನಾಡಪ್ರಭುವಿನ ಜೀವನ, ಸಂದೇಶಗಳ ಪಡಿಯಚ್ಚು ನಿರ್ಮಾಣ ಕಾಮಗಾರಿಗೆ ಈಗಾಗಲೇ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡರ ಜೀವನಕ್ಕೆ ಸಂಬಂಧಿಸಿದ 46 ಸ್ಥಳಗಳಿಗೆ ಕಾಯಕಲ್ಪ ನೀಡುತ್ತಿದೆ. ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ವೀರಸಮಾಧಿ ತಾಣವನ್ನಾಗಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು. ಅಲ್ಲದೆ 50 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ತಲೆ ಎತ್ತಲಿದೆ ಎಂದು ಹೇಳಿದರು.
ಸಚಿವರುಗಳಾದ ಆರ್.ಅಶೋಕ, ಡಾ. ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಮನಿರತ್ನ, ಎನ್.ನಾಗರಾಜು(ಎಂಟಿಬಿ), ನಾರಾಯಣಗೌಡ, ಲೋಕಸಭಾ ಸದಸ್ಯರಾದ ಡಿ.ವಿ.ಸದಾನಂದಗೌಡ, ರಾಜ್ಯಸಭಾ ಸದಸ್ಯರಾದ ಜಗ್ಗೇಶ್, ಬಿ.ಡಿ.ಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಯಪ್ಪ ಅಧ್ಯಕ್ಷರಾದ ರವಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ.ಎಲ್.ಎನ್, ವಿಧಾನಪರಿಷತ್ ಸದಸ್ಯರುಗಳಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ, ಅ.ದೇವಗೌಡ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ, ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.