ಬೆಂಗಳೂರು : ತಲಕಾಡಿನ ಗಂಗರ ಇತಿಹಾಸವನ್ನು ತಿಳಿಯಲು ಸಂಶೋಧನಾ ಪ್ರಾಧಿಕಾರ ರಚನೆ ಬಗ್ಗೆ ಬರುವ ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ಜಯರಾಮ್ ರಾಯಪುರ ವಿರಚಿತ ಚಾವುಂಡರಾಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು. ಶ್ರೇಷ್ಠ ಆಡಳಿತಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಸಾಹಿತ್ಯ ಬೆಳೆಯಲು ವ್ಯಕ್ತಿತ್ವವನ್ನು ಗುರುತಿಸುವ ಕೆಲಸವಾಗಬೇಕು. ಐತಿಹಾಸಿಕ ಸಾಹಿತ್ಯವನ್ನು ವ್ಯಕ್ತಿತ್ವದ ಮೂಲಕ ಪ್ರತಿಬಿಂಬಿಸಿದರೆ ಸತ್ಯಾಂಶ ತಿಳಿಯುತ್ತದೆ. ಐ.ಆರ್.ಎಸ್. ಅಧಿಕಾರಿ ಜಯರಾಂ ಅವರು ಸಾಕಷ್ಟು ಸಮಾಜಮುಖಿ ಕೃತಿಗಳನ್ನು ಬರೆದಿದ್ದಾರೆ ಎಂದರು.
ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ
ಜಯರಾಮ್ ರಾಯಪುರ ಅವರೊಂದಿಗೆ ನಮ್ಮ ಸ್ನೇಹ
ವಾಗಿದ್ದೇ ಸಾಹಿತ್ಯದಿಂದ. ಬರವಣಿಗೆ ಹಾಗೂ ನಾಟಕ ಅವರ ಹವ್ಯಾಸ. . ಸಂಪೂರ್ಣವಾಗಿ ಸಾಹಿತ್ಯ, ಚಿಂತನಾ ಲೋಕಕ್ಕೆ ಬಂದು ಕೃತಿಗೆ ಇಳಿಸಿದ್ದಲ್ಲದೇ ನಾಟಕವನ್ನು ಮಾಡಿಸಿದ್ದಾರೆ. ಕರ್ನಾಟಕದ ಅಧಿಕಾರಿ ಮಾತ್ರವಲ್ಲ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳು ಎಂದರು.
ಅವರ ನೇತೃತ್ವದಲ್ಲಿ ಹೊರಬರುತ್ತಿರುವ ಸಮಾಜಮುಖಿ ಮಾಸಪತ್ರಿಕೆ ಅತ್ಯುತ್ತಮವಾಗಿ ಮೂಡಿಬರುತ್ತಿದೆ. ಸಮಾಜದ ಧ್ವನಿಯಾಗಿಯೂ ಹೊರಬರಲಿ ಎಂದರು.
ಸಾಧನೆಗಳ ಮೂಲಕ ಅವರ ವ್ಯಕ್ತಿತ್ವ ರಚನೆ
ಹಲವಾರು ಪ್ರಯೋಗಗಳನ್ನು ಮಾಡಿದ ಅವರೊಬ್ಬ ಪ್ರಯೋಗಶೀಲ ಐ.ಆರ್.ಎಸ್ ಅಧಿಕಾರಿ. ಅವರ ಪ್ರಯೋಗಶೀಲತೆಯೇ ಚಾವುಂಡರಾಯ ಕೃತಿ. ಮೂರೂ ಕೃತಿಗಳಲ್ಲಿ ಕೇಂದ್ರವಾಗಿರುವ ವ್ಯಕ್ತಿತ್ವ ಹಲವಾರು ಆಯಾಮಗಳಿರುವ ವ್ಯಕ್ತಿ ತ್ವ. ಇದುವರೆಗೂ ಇತಿಹಾಸದಲ್ಲಿ ಪ್ರಕಟವಾಗದಿರುವ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯ ಮಾಡಿಸಿದ್ದಾರೆ. ಗಂಗರ ಬಗ್ಗೆ ತಿಳಿದಿರುವ ನಮಗೆ ಚಾವುಂಡರಾಯ ಎಂಬ ದಂಡ ನಾಯಕನ ಬಗ್ಗೆ ಕೇಳಿರುವುದಿಲ್ಲ. ಅವರ ಸಾಧನೆಗಳ ಮೂಲಕ ಅವರ ವ್ಯಕ್ತಿತ್ವವನ್ನು ರೂಪಿಸುವ ಕೆಲಸ ಮಾಡಿದ್ದಾರೆ. ಒಂದು ರೀತಿಯಲ್ಲಿ ಒಂದು ಮಾದರಿಯನ್ನು ಸಿದ್ಧಪಡಿಸಿದ್ದಾರೆ. ಕನ್ನಡದ ಸಾಹಿತ್ಯದಲ್ಲಿ ಇದೊಂದು ಹೊಸ ಆಯಾಮ ಬೆಳೆಸಿದ್ದಾರೆ ಎಂದರು.
ಅಹಿಂಸೆ ಮತ್ತು ತ್ಯಾಗದ ಪ್ರಬಲ ಪ್ರತಿಪಾದನೆ
ಗಂಗರು ಆಳಿರುವ ಪ್ರದೇಶದ ಬಂಕಾಪುರದಿಂದ ಪ್ರಾರಂಭವಾಗುತ್ತದೆ. ಗಂಗರ ಕಾಲದ ಜೈನ ಮತ್ತು ಹಿಂದೂ ಧರ್ಮದ ಸಂಕ್ರಮಣ ಕಾಲವದು. ಹಿಂದೂ ಧರ್ಮದಲ್ಲಿರುವ ನಿಷ್ಕ್ರಿಯತೆಯಿಂದ ಹುಟ್ಟಿದ್ದು ಜೈನ ಧರ್ಮ. ಜೈನ ಧರ್ಮದಿಂದ ಹಿಂದೂ ಧರ್ಮ ಪುನಶ್ಚೇತನಗೊಂಡಿದೆ. ಜೈನ ಧರ್ಮವು ಬದುಕಿನ ಬಗ್ಗೆ ಮತ್ತು ಸಾವಿನ ಬಗ್ಗೆ ಬಹಳ ಅದ್ಭುತವಾದ ಕಲ್ಪನೆ ಇದೆ. ಅಹಿಂಸೆ ಮತ್ತು ತ್ಯಾಗದ ಪ್ರತಿಪಾದನೇ ಬಹಳ ಪ್ರಬಲವಾಗಿದೆ. ರಾಜ ಮಾರಸಿಂಹ ಸಲ್ಲೇಖನ ಪ್ರಯೋಗದ ಸಂದರ್ಭದಲ್ಲಿ ನಡೆದ ಸಂಭಾಷಣೆ ಈ ನಾಟಕದ ಪ್ರಮುಖ ಅಂಶ. ರಾಜನಾದವನು ರತನ್ನ ಸ್ಥಾನವನ್ನು ತ್ಯಾಗ ಮಾಡುವುದು ಒಂದು ಭಾಗವಾದರೆ, ವ್ಯಕ್ತಿ ತ್ವವನ್ನೇ ತ್ಯಾಗ ಮಾಡಿಕೊಳ್ಳುವುದು ಪರಿಪೂರ್ಣ ತ್ಯಾಗ. ಬದುಕಿನಲ್ಲಿ ತ್ಯಾಗ ಅತ್ಯಂತ ಸುಖ ಕೊಡುವ ಅಂಶ ಎಂದರು.
ಇತಿಹಾಸವನ್ನು ಪ್ರತಿಯೊಬ್ಬ ಕನ್ನಡಿಗನೂ ತಿಳಿಯಬೇಕು
ಗಂಗರು ಮತ್ತು ರಾಷ್ಟಕೂಟರು ವಿಶಿಷ್ಟ ಆಡಳಿತ ನೀಡಿ, ಕನ್ನಡ ನಾಡಿನ ನಿರ್ಮಾಣ ದಲ್ಲಿ ಪ್ರಮುಖ ಪಾತ್ರ ವಹಿಸಿವೆ. ನಾಡಿನ ಭಾಷೆ, ಸಂಸ್ಕೃತಿ, ಕಲೆ ಎಲ್ಲವೂ ಆಳವಾಗಿ ಬೇರೂರಿರುವುದು ಇವರ ಕಾಲದಲ್ಲಿ. ಈ ಇತಿಹಾಸವನ್ನು ಪ್ರತಿಯೊಬ್ಬ ಕನ್ನಡಿಗನೂ ತಿಳಿಯಬೇಕು. ಆಗ ಮಾತ್ರ ಭವಿಷ್ಯದ ಸುಸಂಸ್ಕೃತ ನಾಡು ಕಟ್ಟಲು ಸಾಧ್ಯ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಾಹಿತಿ ಪ್ರೊ. ಹೆಚ್. ಎಸ್.ಶಿವಪ್ರಕಾಶ್, ಹಿರಿಯ ಸಾಹಿತಿ ಹಂ.ಪಾ.ನಾಗರಾಜಯ್ಯ, ಜಯರಾಮ ರಾಯಪುರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.