ಬೆಂಗಳೂರು : ಅಪೌಷ್ಟಿಕತೆ ಹಾಗೂ ಅನೀಮಿಯಾ ನಿವಾರಣೆಗಾಗಿ ಆರಂಭಿಕ ಹಂತದಲ್ಲೇ ಮಕ್ಕಳ ಆರೋಗ್ಯ ತಪಾಸಣೆ ಮಾಡುವುದು ಮುಖ್ಯ. ಇದಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ಶಾಲೆ ಸೇರಿದಂತೆ ಮಕ್ಕಳಿರುವ ಜಾಗಗಳಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ, ಅಪೌಷ್ಟಿಕತೆ ಮತ್ತು ಅನಿಮೀಯ ಮುಕ್ತ ಕರ್ನಾಟಕ ಕುರಿತ ಕಾರ್ಯಾಗಾರದಲ್ಲಿ ಸಚಿವರು ಮಾತನಾಡಿದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಟ್ಟುಗೂಡಿಸಿ ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ನಮ್ಮ ಇಲಾಖೆಯಿಂದ ತಪಾಸಣೆ ನಡೆಸಿ ಗುರಿಗಳನ್ನು ಮುಟ್ಟಿರುವುದನ್ನು ತೋರಿಸುತ್ತೇವೆ. ಆದರೆ ಈ ಬಗ್ಗೆ ನಿಜವಾಗಿಯೂ ಆತ್ಮಾವಲೋಕ ಮಾಡಿಕೊಂಡರೆ ನಾವು ಸಂಪೂರ್ಣವಾಗಿ ತಪಾಸಣೆ ನಡೆಸುತ್ತಿಲ್ಲ ಎಂದೇ ಹೇಳಬೇಕು. ಪಿಎಚ್ಸಿ ವ್ಯಾಪ್ತಿಯಲ್ಲಿ ವೈದ್ಯರು ಶಾಲೆಗಳಿಗೆ ಹೋಗುವುದು ಅಥವಾ ಮಕ್ಕಳೇ ಪಿಎಚ್ಸಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದ ಗಂಭೀರ ಕ್ರಮ ವಹಿಸಬೇಕು ಎಂದರು.
ಇಂದಿನ ಕಾಲದಲ್ಲೂ ಮಾತೃ ಮರಣವಾಗುತ್ತಿರುವುದು ಅತ್ಯಂತ ಅಪಮಾನದ ಸಂಗತಿ. ರಾಜ್ಯದ ಪ್ರತಿ ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆಗೆ ಮುಂದೆ ಬರುವಂತಾಗಬೇಕು. ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವುದು ಒಂದು ಪರಂಪರೆಯ ರೂಢಿಯಾಗಿ ಬೆಳೆದುಬಂದಿದೆ. ಇದೇ ರೀತಿ ರಾಜ್ಯದಲ್ಲಿ ಮಹಿಳೆಯರು, ತಾಯಂದಿರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದನ್ನು ಪರಂಪರೆಯಂತೆ ಬೆಳೆಸಬೇಕು. ಇದಕ್ಕಾಗಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದರು.
ಅಪೌಷ್ಟಿಕತೆ ನಿವಾರಣೆಗೆ ಇನ್ನಷ್ಟು ಕೆಲಸಗಳಾಗಲಿ
ಕರ್ನಾಟಕವು ಆರೋಗ್ಯ ವಲಯದಲ್ಲಿ ಉತ್ತಮ ಸುಧಾರಣೆ ಮಾಡಿದೆ. ಆರೋಗ್ಯ ಸೂಚ್ಯಂಕದಲ್ಲೂ ಉತ್ತಮ ಪ್ರಗತಿಯಾಗಿದೆ. ಆದರೆ ಅಪೌಷ್ಟಿಕತೆ ಹಾಗೂ ಅನೀಮಿಯಾ ವಿಚಾರ ಬಂದಾಗ ನಾವು ಇನ್ನಷ್ಟು ಕೆಲಸಗಳನ್ನು ಮಾಡಬಹುದು ಎಂದೆನಿಸುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರ ಈ ಸಮಸ್ಯೆಯ ನಿವಾರಣೆಗೆ ಅತ್ಯಂತ ಬದ್ಧತೆ ಹೊಂದಿದೆ ಎಂದರು.
ರಿಜಿಸ್ಟರ್ ಜನರಲ್ ಆಫ್ ಇಂಡಿಯಾದವರು ಹೇಳಿದಂತೆ, 2018-2020 ರಲ್ಲಿ ದೇಶದ ತಾಯಿ ಮರಣ ಪ್ರಮಾಣ 97 ಆಗಿತ್ತು. 2001-2003 ರಲ್ಲಿ 301 ಆಗಿತ್ತು. ಅದೇ ರೀತಿ, ಶಿಶು ಮರಣ ಪ್ರಮಾಣ 2005 ರಲ್ಲಿ 58 ಆಗಿದ್ದು, 2021 ರಲ್ಲಿ 27 ಆಗಿದೆ. ಈ ಬಗ್ಗೆ ಸ್ವಲ್ಪ ಸಮಾಧಾನ ಇದ್ದರೂ, ಮುಂದುವರಿಯಬೇಕಾದ ದಾರಿ ಇನ್ನಷ್ಟು ಇದೆ ಎಂದರು.
ಮಗು ಜನಿಸಿದ ನಂತರದ ಎರಡು ವರ್ಷಗಳಲ್ಲೇ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲೇ ಸಮಸ್ಯೆ ಪತ್ತೆ ಮಾಡಿ ಪರಿಹರಿಸದಿದ್ದರೆ ಅದು ಮೆದುಳಿನ ಆರೋಗ್ಯ ಮೇಲೆ ಹಾಗೂ ಶರೀರದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಮಗು ಜನಿಸಿದ ಮೊದಲ 1,000 ದಿನಗಳಲ್ಲಿ ಅಪೌಷ್ಟಿಕತೆ ಹಾಗೂ ಅನೀಮಿಯಾವನ್ನು ನಿವಾರಣೆ ಮಾಡಲು ಕ್ರಮ ವಹಿಸಬೇಕಾಗುತ್ತದೆ. ಅದರಲ್ಲೂ ಹೆಣ್ಣುಮಕ್ಕಳು ಅಪೌಷ್ಟಿಕತೆಗೆ ಒಳಗಾದರೆ, ಅವರು ಬೆಳೆದು ಮಗುವಿಗೆ ಜನ್ಮ ನೀಡುವಾಗ ಆ ಮಗು ಕಡಿಮೆ ತೂಕ ಹೊಂದಿರುವ ಸಮಸ್ಯೆ ಎದುರಾಗುತ್ತದೆ ಎಂದರು.
ʼಸ್ವಸ್ಥ ಕರ್ನಾಟಕ, ಸುಸ್ಥಿರ ಕರ್ನಾಟಕʼ ಎಂಬ ಘೋಷಣೆಯೊಂದಿಗೆ ಪ್ರತಿ ಕನ್ನಡಿಗ ಆರೋಗ್ಯವಾಗಿರಬೇಕೆಂಬುದು ಸರ್ಕಾರದ ಆಶಯ. ಅಪೌಷ್ಟಿಕತೆ ನಿವಾರಣೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕೂಡ ಕೆಲಸ ಮಾಡುತ್ತಾರೆ. ಹಾಗೆಯೇ ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೊದಲಾದ ಇಲಾಖೆಗಳ ನಡುವೆ ಸಮನ್ವಯ ಬೇಕಾಗುತ್ತದೆ. ಇಲ್ಲದಿದ್ದರೆ ಅಪೌಷ್ಟಿಕತೆ ನಿವಾರಣೆ ಸಾಧ್ಯವಿಲ್ಲ. ಆರೋಗ್ಯ ಇಲಾಖೆಯಲ್ಲಿ ಪ್ರತಿ ಬಾರಿ ಸಭೆ ಮಾಡುವಾಗಲೂ, ಐಇಸಿ ಚಟುವಟಿಕೆ ಬಗ್ಗೆ ಹೇಳುತ್ತಿರುತ್ತೇನೆ. ನಮ್ಮಲ್ಲಿ ಅನೇಕ ರಾಷ್ಟ್ರಿಯ, ರಾಜ್ಯ ಆರೋಗ್ಯ ಕಾರ್ಯಕ್ರಮಗಳಿವೆ. ಆದರೆ ಐಇಸಿ ಚಟುವಟಿಕೆಗೆ ಹೆಚ್ಚು ಗಮನ ನೀಡುತ್ತಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು.
ಬಜೆಟ್ನಲ್ಲಿ ಶೇ.8 ರಷ್ಟು ಪಾಲನ್ನು ಆರೋಗ್ಯ ವಲಯಕ್ಕೆ ಮೀಸಲಿಡಬೇಕು ಎಂಬುದು ತಜ್ಞರ ಅಭಿಪ್ರಾಯ. ಕರ್ನಾಟಕ ಬಜೆಟ್ನಲ್ಲಿ ಶೇ.5 ರಷ್ಟನ್ನು ಆರೋಗ್ಯಕ್ಕೆ ಮೀಸಲಿಡಲಾಗಿದೆ. ಕಳೆದ 2-3 ವರ್ಷಗಳಲ್ಲಿ ಕೋವಿಡ್ ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ದೊರೆತಿದ್ದು, ಆರೋಗ್ಯ ಮೂಲಸೌಕರ್ಯವನ್ನು 5-6 ಪಟ್ಟು ಹೆಚ್ಚಿಸಲಾಗಿದೆ. ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ನೀಡಿದೆ. ರಾಜ್ಯದಲ್ಲಿ 6,000 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಗುರಿ ನೀಡಿದ್ದು, ರಾಜ್ಯದಲ್ಲಿ 8,250 ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.