ದಾವಣಗೆರೆ : ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕ ರೇಣುಕಾಚಾರ್ಯ ಅವರು ವಾಟ್ಸಪ್ ಗ್ರೂಪ್ ನಲ್ಲಿ ಕೆಲವು ವಿಡಿಯೋಗಳನ್ನು ಶೇರ್ ಮಾಡಿದ್ದು, ಚಂದ್ರಶೇಖರ್ ಅಪಘಾತದಿಂದ ಸಾವು ಸಂಭವಿಸಿಲ್ಲ. ಇದು ಕೊಲೆ, ಕೊಲೆ ಮಾಡಿ ಶವ ತಂದು ಇಲ್ಲಿ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮಗೆ ಒಂದು ವರ್ಷದಿಂದಲೂ ಬೆದರಿಕೆ ಕರೆಗಳು ಬರುತ್ತಿದ್ದು, ಈ ಕುರಿತು ದೂರು ಸಹ ನೀಡಲಾಗಿತ್ತು. ಆದರೆ ಈಗ ನಮ್ಮ ಪುತ್ರನ ಕೊಲೆಯಾಗಿದೆ. ಒಬ್ಬ ಶಾಸಕರ ಪುತ್ರನಿಗೆ ಈ ಗತಿಯಾದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ್ದಾರೆ.
ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರು ಕಾಲುವೆಯಲ್ಲಿ ಇರುವುದನ್ನು ನನ್ನ ಕ್ಷೇತ್ರದ ಜನತೆಯೇ ಡ್ರೋನ್ ಮೂಲಕ ಪತ್ತೆ ಹಚ್ಚಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಚಂದ್ರಶೇಖರ್ ನನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣ ಹಿನ್ನೆಲೆ ಚಂದ್ರಶೇಖರ್ ತಂದೆ ರಮೇಶ್ ದೂರಿನ ಮೇರೆಗೆ ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ (FIR) ದಾಖಲಿಸಿದ್ದಾರೆ.ಐಪಿಸಿ ಸೆಕ್ಷನ್ 302,201 ಹಾಗೂ 427 ರಡಿ ಪ್ರಕರಣ ದಾಖಲಾಗಿದ್ದು, ಮೃತ ದೇಹದ ಕೈ ಕಾಲುಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ದಾಖಲಿಸಲಾಗಿದೆ.
ದೂರಿನಲ್ಲಿ ಏನೇನಿದೆ..?
ಮೃತ ದೇಹದ ಕೈ ಕಾಲು ಬಟ್ಟೆಯಿಂದ ಕಟ್ಟಿ ಹಾಕಿದ್ದು, ಕಿವಿಗಳಿಗೆ ಹೊಡೆದಿರುವ ಗುರುತುಗಳು ಪತ್ತೆಯಾಗಿದೆ. ತಲೆಗೆ ಆಯುಧಗಳಿಂದ ಹೊಡೆದಿರುವ ಹಾಗೆ , ದೇಹದ ಉಳಿದ ಭಾಗದಲ್ಲಿ ಹೊಡೆದಿರುವ ಬಗ್ಗೆ ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ. ನನ್ನ ಮಗನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ, ಅಪಘಾತದ ರೀತಿಯಲ್ಲಿ ಬಿಂಬಿಸಲಾಗಿದೆ. ಮೃತದೇಹವನ್ನು ಕಾರಿನಲ್ಲಿ ಇರಿಸಿ ಕಾರು ಜಖಂಗೊಳಿಸಿದ್ದಾರೆ ಎಂದು ರಮೇಶ್ ಎಫ್ ಐ ಆರ್ ದಾಖಲಿಸಿದ್ದಾರೆ.