ನವದೆಹಲಿ : ಭಾರತೀಯ ಆಹಾರ ನಿಗಮ (FCI) ದೇಶದ 12 ರಾಜ್ಯಗಳ 249 ಸ್ಥಳಗಳಲ್ಲಿ 9236 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕ ಉಕ್ಕಿನ ಸಿಲೋ(Modern Steel Silos)ಗಳನ್ನ ನಿರ್ಮಿಸಲು ಯೋಜಿಸಿದೆ. ಅವುಗಳನ್ನ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ನಿರ್ಮಿಸಲಾಗುವುದು. ಇನ್ನು ಅವುಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 111.125 ಲಕ್ಷ ಮೆಟ್ರಿಕ್ ಟನ್ ಆಗಿರುತ್ತದೆ. ಈ ಸಿಲೋಗಳನ್ನ ಹೊಲಗಳ ಬಳಿ ನಿರ್ಮಿಸಲಾಗುವುದು, ಇದರಿಂದ ರೈತನಿಗೆ ತನ್ನ ಧಾನ್ಯಗಳನ್ನ ತರಲು ತೊಂದರೆಯಾಗುವುದಿಲ್ಲ ಹಾಗೂ ಸಮಯವೂ ಉಳಿತಾಯವಾಗುತ್ತೆ.
ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈ ಸೈಲೋಗಳನ್ನ ಮೂರು ಹಂತಗಳಲ್ಲಿ ನಿರ್ಮಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಹಬ್ ಮತ್ತು ಸ್ಪೋಕ್ ಮಾದರಿಯ ಮೊದಲ ಹಂತದಲ್ಲಿ, 34.875 LMT ಸಾಮರ್ಥ್ಯದ ಸೈಲೋಗಳನ್ನ ಎಫ್ ಸಿಐ 80 ಸ್ಥಳಗಳಲ್ಲಿ ಉತ್ಪಾದಿಸಲಿದೆ. ಇದರಲ್ಲಿ 14 ಸ್ಥಳಗಳಲ್ಲಿ 10.125 ಎಲ್ಎಂಟಿ ಸೈಲೋಗಳನ್ನು ಡಿಬಿಎಫ್ಒಟಿ (ಡಿಸೈನ್, ಬಿಲ್ಡ್, ಫಂಡ್, ಓನ್ ಮತ್ತು ಟ್ರಾನ್ಸ್ಫರ್) ಮೋಡ್ ಅಡಿಯಲ್ಲಿ ನಿರ್ಮಿಸಲಾಗುವುದು. ಅದೇ ಸಮಯದಲ್ಲಿ, ಡಿಬಿಎಫ್ಒ (ವಿನ್ಯಾಸ, ನಿರ್ಮಾಣ, ನಿಧಿ, ಸ್ವಂತ ಮತ್ತು ಕಾರ್ಯಾಚರಣೆ) ಮೋಡ್ ಅಡಿಯಲ್ಲಿ ಒಟ್ಟು 24.75 ಎಲ್ಎಂಟಿ ಸಾಮರ್ಥ್ಯದ 66 ಸೈಲೋಗಳನ್ನ ನಿರ್ಮಿಸಲಾಗುವುದು.
ಮೊದಲ ಹಂತದಲ್ಲಿ 80 ಸೈಲೋಗಳ ನಿರ್ಮಾಣ
ಮೊದಲ ಹಂತದಲ್ಲಿ, ದೇಶದ 9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 80 ಸ್ಥಳಗಳಲ್ಲಿ ಸೈಲೋಗಳನ್ನ ನಿರ್ಮಿಸಲಾಗುವುದು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಲು 2,800 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಲಿದೆ. ರಾಜ್ಯ ಸರ್ಕಾರಗಳು, ನೀತಿ ಆಯೋಗ, ಹಣಕಾಸು ಸಚಿವಾಲಯ, ರೈಲ್ವೆ ಸಚಿವಾಲಯ, ಉಕ್ಕು ಸಚಿವಾಲಯದೊಂದಿಗೆ ಸಮಾಲೋಚಿಸಿ ಅವುಗಳನ್ನು ನಿರ್ಮಿಸಲಾಗುತ್ತಿದೆ.
ರೈತರಿಗೆ ಅನುಕೂಲ.!
ಬೃಹತ್ ನಿರ್ವಹಣಾ ಸೌಲಭ್ಯಗಳನ್ನ ಹೊಂದಿರುವ ಈ ಆಧುನಿಕ ಸೈಲೋಗಳು ಆಹಾರ ಧಾನ್ಯಗಳನ್ನ ಸಂಗ್ರಹಿಸುವ ವೈಜ್ಞಾನಿಕ ವಿಧಾನವಾಗಿದೆ ಮತ್ತು ಆಹಾರ ಧಾನ್ಯಗಳ ಉತ್ತಮ ಸಂರಕ್ಷಣೆಯನ್ನ ಖಚಿತಪಡಿಸುತ್ತದೆ. ಹೊಲಗಳ ಬಳಿ ನಿರ್ಮಿಸಲಾದ ಈ ಆಧುನಿಕ ಸೈಲೋಗಳು ಖರೀದಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತವೆ. ಹೊಲ ಗದ್ದೆಗಳ ಸಮೀಪದಲ್ಲಿರುವುದರಿಂದ, ರೈತರು ತಮ್ಮ ಬೆಳೆಯನ್ನ ಸೈಲೋಗೆ ತರಲು ಕಡಿಮೆ ಸಮಯ ತೆಗೆದುಕೊಳ್ಳುವುದರ ಜೊತೆಗೆ ವೆಚ್ಚವನ್ನೂ ಸಹ ಕಡಿಮೆ ಮಾಡಬೋದು.
ಸೈಲೋಸ್ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತೆ. ಇಷ್ಟೇ ಅಲ್ಲ, ಇಲ್ಲಿ ರೈತನ ಬೆಳೆಯನ್ನ ತೂಕ ಮಾಡಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಡಿಬಿಎಫ್ಒ ಮೋಡ್ ಅಡಿಯಲ್ಲಿ ಟೆಂಡರ್’ನ್ನ ಅಕ್ಟೋಬರ್ 31, 2022 ರಂದು ತೆರೆಯಲು ನಿರ್ಧರಿಸಲಾಗಿದೆ. ಅದೇ ಸಮಯದಲ್ಲಿ, ಡಿಬಿಎಫ್ಒಟಿ ವಿಧಾನದ ಟೆಂಡರ್ 10.08.2022 ರಂದು ತೆರೆಯಲಾಗಿದೆ.