ಬೆಂಗಳೂರು : ಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಶಾಲೆ ಆರಂಭಕ್ಕೆ 15 ನಿಮಿಷ ಮುಂಚೆ ಬರಬೇಕು ಹಾಗೂ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಿ ಹಾಕಬೇಕು ಎಂದು ಸೂಚನೆ ನೀಡಿದೆ.
ಈ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಕಚೇರಿ ಸಿಬ್ಬಂದಿ ವರ್ಗ ನಿಗದಿತ ಅವಧಿಗಿಂತ ಕನಿಷ್ಟ 15 ನಿಮಿಷ ಮುಂಚಿತವಾಗಿ ಕರ್ತವ್ಯಕ್ಕೆ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ರಜೆ ಮೇಲೆ ತೆರಳುವಾಗ ಸಂಬಂಧಪಟ್ಟ ಮೇಲಧಿಕಾರಿಗಳಿಂದ ಪೂರ್ವಾನುಮತಿ ಮಂಜೂರು ಪಡೆದು ತೆರಳಬೇಕು ಎಂದು ತಿಳಿಸಿದೆ.
ಇನ್ನು ವೇತನ ಬಟವಾಡೆ ಅಧಿಕಾರಿಗಳು ತಮ್ಮ ಅಧೀನ ಕಚೇರಿ ಮತ್ತು ಶಾಲೆಗಳ ಬಯೋಮೆಟ್ರಿಕ್ ಹಾಜರಾತಿ ಚೆಕ್ ಇನ್ ಮತ್ತು ಚೆಕ್ ಔಟ್ ಹಾರ್ಡ್/ಸಾಫ್ಟ್ ದಾಖಲೆಗಳನ್ನು ಪ್ರತಿ ತಿಂಗಳ 25 ನೇ ತಾರೀಖಿನೊಳಗೆ ಪಡೆದು ಅದಕ್ಕೆ ಅನುಗುಣವಾಗಿ ವೇತನ ಪಾವತಿಸಲು ತಿಳಿಸಿದೆ.