ರಾಮನಗರ : ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ 75 ಸಾವಿರ ಯುವಜನರಿಗೆ ಉಚಿತವಾಗಿ `ಅಮೃತ ಕೌಶಲ್ಯ ತರಬೇತಿ’ ನೀಡಲಾಗುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ 38 ಸಾವಿರಕ್ಕೂ ಹೆಚ್ಚು ಅರ್ಹರಿಗೆ ತರಬೇತಿ ನೀಡಲು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಗುಜರಾತ್ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಆರೋಪಿಗಳ ಬಿಡುಗಡೆ
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕನಕಪುರ ತಾಲ್ಲೂಕಿನ ಮರಿಯಪ್ಪ ಮತ್ತು ಅವರ ಪತ್ನಿಯನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಪ್ರಧಾನಮಂತ್ರಿ ಮೋದಿಯವರ ಕನಸಾದ ಆತ್ಮನಿರ್ಭರ ಭಾರತವನ್ನು ಸಾಕಾರಗೊಳಿಸಲು, ಜಿಲ್ಲೆಯಲ್ಲಿ ಸ್ಕಿಲ್-ಹಬ್ ಯೋಜನೆ ಜಾರಿಗೊಳಿಸಲಾಗುವುದು. ಈ ಮೂಲಕ ಜಿಲ್ಲೆಯ ಪ್ರತೀ ಕೌಶಲ್ಯ ಕೇಂದ್ರದಲ್ಲೂ 3,000 ಉದ್ಯಮಿಗಳಿಗೆ ಸೂಕ್ತ ವಾತಾವರಣ ಸೃಷ್ಟಿಸಲಾಗುವುದು ಎಂದು ಅವರು ತಿಳಿಸಿದರು.
ಪುಟ್ಟ ಪೋರನನ್ನು ʻ ಹಾವಿನ ದಾಳಿʼಯಿಂದ ರಕ್ಷಿಸಿದ ʻಧೈರ್ಯಶಾಲಿ ತಾಯಿ ʼ: ಅಘಾತಕಾರಿ ʻ video viral ʼ | ವೀಕ್ಷಿಸಿ
ರಾಜಧಾನಿಯ ಪಕ್ಕದಲ್ಲೇ ಇರುವ ಜಿಲ್ಲೆಯನ್ನು ಕೃಷಿ, ಕೈಗಾರಿಕೆ, ಆರೋಗ್ಯಸೇವೆ, ಶಿಕ್ಷಣ ಮತ್ತು ಪ್ರವಾಸೋದ್ಯಮಗಳನ್ನು ಮುಖ್ಯವಾಗಿ ಇಟ್ಟುಕೊಂಡು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಹಾರೋಹಳ್ಳಿಯಲ್ಲಿ ಮಹಿಳೆಯರಿಗೆಂದೇ 300 ಎಕರೆ ವಿಶಾಲವಾದ ಉದ್ದಿಮೆಗಳ ಪಾರ್ಕ್ ಸ್ಥಾಪಿಸಲಾಗಿದೆ. ಇಲ್ಲಿ 100 ಮಹಿಳೆಯರು ತಮ್ಮ ಘಟಕಗಳನ್ನು ಆರಂಭಿಸಿದ್ದಾರೆ ಎಂದು ಅವರು ನುಡಿದರು.
ನದಿ, ಅರಣ್ಯ, ಜಲಪಾತ, ಪುರಾತನ ದೇಗುಲಗಳು, ಕೋಟೆಕೊತ್ತಲಗಳು, ಬೆಟ್ಟಗಳನ್ನು ಹೊಂದಿರುವ ಜಿಲ್ಲೆಯಲ್ಲಿ, ಇತ್ತೀಚೆಗೆ ಮೊಟ್ಟಮೊದಲ ಪ್ರವಾಸೋದ್ಯಮ ಶೃಂಗಸಭೆ ನಡೆಸಿ, ಚರ್ಚಿಸಲಾಗಿದೆ. ಇದರಲ್ಲಿ 63 ಹೂಡಿಕೆದಾರರು ಪಾಲ್ಗೊಂಡಿದ್ದು, ಜಿಲ್ಲೆಯಲ್ಲಿ ಪ್ರವಾಸ ಮತ್ತು ಆತಿಥ್ಯೋದ್ಯಮ ಬೆಳೆಸಲು ಆಸಕ್ತಿ ತೋರಿದ್ದಾರೆ ಎಂದು ಅವರು ವಿವರಿಸಿದರು.
ರಾಮನಗರದಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜನ್ನು 70 ಕೋಟಿ ರೂ. ವೆಚ್ಚದಲ್ಲಿ ಐಐಟಿ ದರ್ಜೆಗೆ ಏರಿಸಲಾಗುವುದು. ಸರಕಾರಿ ಶಾಲೆಗಳ ಬಲವರ್ಧನೆಯ ದೃಷ್ಟಿಯಿಂದ ಪ್ರತೀ ಪಂಚಾಯಿತಿ ಮಟ್ಟದಲ್ಲೂ ಮಾದರಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ತಲೆ ಎತ್ತುತ್ತಿರುವ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೂ ಆರಂಭವಾಗಲಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಜಿಲ್ಲೆಯಲ್ಲಿ 4.34 ಲಕ್ಷ ಮಂದಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಲಜೀವನ್ ಮಿಷನ್ ಅಡಿ ಕೈಗೊಂಡಿರುವ ಕಾಮಗಾರಿಗಳು 2023ರೊಳಗೆ ಮುಗಿಯಲಿದ್ದು, ಜಿಲ್ಲೆಯ ಪ್ರತಿಯೊಂದು ಮನೆಗೂ ನದೀಮೂಲದ ಕುಡಿಯುವ ನೀರು ಪೂರೈಸಲಾಗುವುದು. ಇದರ ಜತೆಗೆ ಕೃಷಿಗೆ ನೆರವು ನೀಡಲು ಅರ್ಕಾವತಿ ಹಿನ್ನೀರು, ದೊಡ್ಡಾಲಹಳ್ಳಿ ಸೂಕ್ಷ್ಮ ನೀರಾವರಿ ಯೋಜನೆ, ಗರಕಹಳ್ಳಿ ಮತ್ತು ಕಣ್ವ ಜಲಾಶಯಗಳಿಂದ 132 ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರ ಜತೆಗೆ ಮಂಚನಬೆಲೆ, ವೈ.ಜಿ.ಗುಡ್ಡ ಮತ್ತು ಶ್ರೀರಂಗ ಯೋಜನೆಗಳ ಮೂಲಕ ಕೃಷಿಗೆ ಬಲ ತುಂಬಲಾಗುವುದು ಎಂದು ಸಚಿವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಸಿಇಒ ದಿಗ್ವಿಜಯ್, ಎಸ್ಪಿ ಸಂತೋಷ್ ಬಾಬು ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ರಾಮನಗರ ಮತ್ತು ಚನ್ನಪಟ್ಟಣಗಳ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಎನ್.ಸಿ.ಸಿ. ಹಾಗೂ ಗೃಹ ರಕ್ಷದ ದಳದ ವತಿಯಿಂದ ಶಿಸ್ತುಬದ್ಧ ಕವಾಯತು ನಡೆಯಿತು.