ಬೆಳಗಾವಿ : ಕಿತ್ತೂರು ಬಳಿ ಕೆಐಎಡಿಬಿ ಜಾಗದಲ್ಲಿ 1,000 ಎಕೆರೆ ಕೈಗಾರಿಕಾ ಟೌನ್ ಶಿಪ್ ನಿರ್ಮಿಸಲು ನಿರ್ಧರಿಸಲಾಗಿದ್ದು, ಇದರಿಂದ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಚನ್ನಮ್ಮನ್ನ ಕಿತ್ತೂರಿನ ಕೋಟೆ ಆವರಣದಲ್ಲಿ ಸೋಮವಾರ ರಾಜ್ಯಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಚೆನ್ನಮ್ಮನ ಅರಮನೆ ನಿರ್ಮಾಣಕ್ಕೆ ನಮ್ಮ ನಾಯಕ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ 50 ಕೋಟಿ ಕೊಟ್ಟಿದ್ದರು, ನಾವು ಈಗ ಅದನ್ನು 115 ಕೋಟಿ ರೂ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಚೆನ್ನಮ್ಮನ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಆಚರಿಸುತ್ತಿದೆ.
ನಿಮ್ಮೆಲ್ಲರ ಆಶೀರ್ವಾದ, ಚನ್ನಮ್ಮ ಆಶೀರ್ವಾದದಿಂದ ಎರಡು ನೀರಾವರಿ ಯೋಜನೆಗೆ ಅನುಮತಿ ಪಡೆಯಬೇಕಿದೆ. ಕೃಷ್ಣ ಮೇಲ್ದಂಡೆ ಸ್ಟೇಜ್ 3 ಯೋಜನೆಗೆ ಕೋರ್ಟ್ನಲ್ಲಿದ್ದು ಒಳ್ಳೆ ಸುದ್ದಿ ಬಂದರೆ ಯೋಜನೆ ಪ್ರಾರಂಭ ಮಾಡುತ್ತೇವೆ. ಕಳಸಾ ಬಂಡೂರಿ ಯೋಜನೆ ಅಂತಿಮ ಹಂತದಲ್ಲಿದೆ. ಅದಕ್ಕೂ ಒಪ್ಪಿಗೆ ಪಡೆದು ಆದಷ್ಟು ಬೇಗ ಕೆಲಸ ಮುಗಿಸುತ್ತೇವೆ ಎಂದರು. ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ ಎಂದರು.