ಮಡಿಕೇರಿ : ರಾಜ್ಯದಲ್ಲಿ ವಸತಿ ಶಾಲೆಗಳ ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶ ಉತ್ತಮವಾಗಿದ್ದು, ಬೇಡಿಕೆಯೂ ಸಹ ಹೆಚ್ಚಿದೆ. ಈ ಹಿನ್ನೆಲೆ ಮುಂದಿನ ಶೈಕ್ಷಣಿಕ ವರ್ಷದಿಂದ 6 ನೇ ತರಗತಿಗೆ 50 ರಿಂದ 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ‘ಓಬವ್ವ ಆತ್ಮ ರಕ್ಷಣೆ ಕಲೆ’ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಂಬೇಡ್ಕರ್, ಮೊರಾರ್ಜಿ ದೇಸಾಯಿ, ಏಕಲವ್ಯ, ಕಿತ್ತೂರು ರಾಣಿ ಚೆನ್ನಮ್ಮ, ನಾರಾಯಣ ಗುರು ಹೀಗೆ ಒಟ್ಟು 830 ವಸತಿ ಶಾಲೆಗಳಿದ್ದು, 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶ ಉತ್ತಮವಾಗಿದ್ದು, ರಾಜ್ಯದಾದ್ಯಂತ ಬೇಡಿಕೆ ಹೆಚ್ಚಿದೆ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದ 6 ನೇ ತರಗತಿ ಪ್ರವೇಶಕ್ಕೆ ‘ಎ’ ಮತ್ತು ‘ಬಿ’ ವಿಭಾಗ ಮಾಡಿ 50 ರಿಂದ 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಮಾಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲೆಮಾರಿಗಳ ಹೀಗೆ ಎಲ್ಲಾ ಬಡ ಗ್ರಾಮೀಣ ವಿದ್ಯಾರ್ಥಿಗಳು ವಸತಿ ಶಾಲೆಗೆ ಸೇರಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದು, ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ವಸತಿ ಶಾಲೆಗಳನ್ನು ಆರಂಬಿಸಿದೆ. ಆ ನಿಟ್ಟಿನಲ್ಲಿ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ನುಡಿದರು.
ರಾಜ್ಯದ ವಿವಿಧ ವಸತಿ ಶಾಲೆಯಲ್ಲಿ ಓದಿದ 14 ವಿದ್ಯಾರ್ಥಿಗಳು ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ) ಗೆ ಆಯ್ಕೆಯಾಗಿದ್ದಾರೆ. ಇದೊಂದು ವಿಶೇಷ ಎಂದರು ಅತಿಶಯೋಕ್ತಿಯಲ್ಲ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
ಶೇ.25 ರಷ್ಟಾದರೂ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆಗೆ ಅವಕಾಶ ಮಾಡಬೇಕು ಎಂದು ಸರ್ಕಾರದ ಆಶಯವಾಗಿದ್ದು, ಆ ನಿಟ್ಟಿನಲ್ಲಿ ವಸತಿ ಹಾಗೂ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಿದವರಿಗೆ ಸಾಧ್ಯವಾದಷ್ಟು ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಮಾಡಲಾಗುವುದು ಎಂದು ಸಚಿವರು ಹೇಳಿದರು.
ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರುಗುತ್ತಿಗೆ ಶಿಕ್ಷಕರಿಗೆ ಸೇವಾ ಭದ್ರತೆ ನೀಡಲಾಗುವುದು. ಹಾಗೆಯೇ ಶಿಕ್ಷಕರಿಗೆ ಗೌರವಧನ ಹೆಚ್ಚಿಸಲಾಗುವುದು. ಆ ನಿಟ್ಟಿನಲ್ಲಿ 18 ಕೋಟಿ ರೂ. ವೆಚ್ಚವಾಗಲಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲು ಮುಂದಾಗಲಾಗಿದೆ ಎಂದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನೇಕ ಸವಾಲುಗಳಿದ್ದು, ಅದನ್ನು ಎದುರಿಸುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಡಲಾಗಿದೆ. ರಾಜ್ಯದಲ್ಲಿ ವಿದ್ಯಾರ್ಥಿ ನಿಲಯ ಪರಿಕಲ್ಪನೆಯನ್ನು ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದರು ಎಂದು ಸ್ಮರಿಸಿದರು.
‘ರಾಜ್ಯದಲ್ಲಿ ಇನ್ನೂ 1.20 ಲಕ್ಷ ಮಕ್ಕಳು ವಿದ್ಯಾರ್ಥಿ ನಿಲಯದಿಂದ ಹೊರಗಿದ್ದಾರೆ. ಎಲ್ಲರಿಗೂ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.’
ವಿದ್ಯಾರ್ಥಿ ನಿಲಯಗಳ ಮೂಲ ಸೌಕರ್ಯಕ್ಕೆ 135 ಕೋಟಿ ರೂ.ಬೇಕಿದ್ದು, ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ಸರ್ಕಾರ ಎಲ್ಲಾ ರೀತಿಯ ಆರ್ಥಿಕ ನೆರವು ನೀಡಲಿದೆ. 50 ಕಡೆಗಳಲ್ಲಿ ಕನಕದಾಸರ ಹೆಸರಿನಲ್ಲಿ ವಿದ್ಯಾರ್ಥಿ ನಿಲಯ, ಹಾಗೆಯೇ 5 ಕಡೆಗಳಲ್ಲಿ(ಮಂಗಳೂರು, ಬೆಳಗಾವಿ, ಗುಲ್ಬರ್ಗಾ, ಮೈಸೂರು, ಬೆಂಗಳೂರು) ದೀನ್ ದಯಾಳ್ ಉಪಾಧ್ಯಾಯ ವಿದ್ಯಾರ್ಥಿ ನಿಲಯದಲ್ಲಿ ಒಂದು ಸಾವಿರ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು. ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಬೇಕು ಎನ್ನುವ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರವೇಶಕ್ಕೆ ಅವಕಾಶ ಒದಗಿಸಲಾಗುವುದು ಎಂದರು.
‘ಬಡವರ ಮಕ್ಕಳು ಮೇಲೆ ಬರುವಂತಾಗಲು ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ರಾಷ್ಟ್ರದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತಾಬೇಕು ಎಂದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.’
ಇಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಐಕ್ಯತಾ ಸಮಾವೇಶ | Karnataka Congress