ಬೆಳಗಾವಿ : ಜಾನುವಾರುಗಳ ಕೊರೊನಾ ಎಂದು ಬಿಂಬಿತವಾಗಿರುವ ಚರ್ಮಗಂಟು ರೋಗ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ 317 ಗ್ರಾಮಗಳಲ್ಲಿ ಒಟ್ಟು 2,575 ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಶಿಧರ ನಾಡಗೌಡ ಸ್ವಷ್ಟಪಡಿಸಿದ್ದಾರೆ.
2,575 ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದಕ್ಕೆ, 33 ಲಕ್ಷ ರೂ. ಪರಿಹಾರ ನೀಡಲು ಹಣದ ಬೇಡಿಕೆ ಇದ್ದು, ಈಗಾಗಲೇ 21.67 ಲಕ್ಷ ರೂ. ಬಿಡುಗಡೆಯಾಗಿದೆ. ಇನ್ನುಳಿದ ಪರಿಹಾರದ ಹಣ ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಶಿಧರ ನಾಡಗೌಡ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಒಂದು ತಿಂಗಳಿಂದ ಚರ್ಮ ಗಂಟು ರೋಗ ಹರಡುತ್ತಿದೆ. ಬೆಳಗಾವಿ ಜಿಲ್ಲೆಯ 317 ಗ್ರಾಮಗಳ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿದೆ. ಒಟ್ಟು 2,575 ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ರೋಗ ನಿಯಂತ್ರಣದಲ್ಲಿದ್ದು, ಚಿಕಿತ್ಸೆ ನೀಡುತ್ತಿದ್ದೇವೆ. 25,953 ಲಸಿಕೆ ಹಾಕಲಾಗಿದ್ದು, ಇನ್ನುಳಿದ ಲಸಿಕೆಯನ್ನು ಹಾಕುತ್ತಿದ್ದೇವೆ. ಇಲಾಖೆಯಿಂದ ಹಂತ ಹಂತವಾಗಿ ಲಸಿಕೆ ಪೂರಕೆ ಮಾಡಲಾಗುತ್ತಿದೆ. 196 ಜಾನುವಾರುಗಳು ಮೃತಪಟ್ಟಿದ್ದು, ಸರ್ಕಾರಕ್ಕೆ 135 ಹಸುಗಳ ವರದಿ ಸಲ್ಲಿಕೆ ಮಾಡಲಾಗಿದೆ ಎಂದರು.
ಸೊಳ್ಳೆ, ಉಣ್ಣೆಗಳಿಂದ ಚರ್ಮ ಗಂಟು ರೋಗ: ಚರ್ಮಗಂಟು ರೋಗ ಮಾರಣಾಂತಿಕ ರೋಗ ಅಲ್ಲ. ರೋಗ ಕಂಡುಬಂದಲ್ಲಿ ಹತ್ತಿರದ ಪಶು ವೈದ್ಯರನ್ನು ಸಂಪರ್ಕಿಸಬೇಕು. ಸೊಳ್ಳೆ, ಉಣ್ಣೆಗಳಿಂದ ರೋಗ ಹರುಡುತ್ತಿದೆ. ಇದಕ್ಕಾಗಿ ಮುನ್ನೆಚ್ಚರಿಕೆ ವಹಿಸಬೇಕು. ಬೆಳಗ್ಗೆ, ಸಾಯಂಕಾಲ ಜಾನುವಾರು ಕಟ್ಟುವ ಕೊಟ್ಟಿಗೆಯನ್ನು ಸ್ವಚ್ಛ ಮಾಡಬೇಕು. ಆ. 6ರಿಂದಲೇ ಜಿಲ್ಲೆಯಲ್ಲಿ ಜಾನುವಾರುಗಳ ಸಂತೆ, ಜಾತ್ರೆಯನ್ನು ನಿಷೇಧಿಸಲಾಗಿದೆ. ಚರ್ಮ ಗಂಟು ರೋಗ ಪ್ರಾಣಿಗಳಿಂದ ಮನುಷ್ಯರಿಗೆ ಹರಡಲ್ಲ. ಹಾಲು, ಹಾಲಿನ ಉತ್ಪನ್ನಗಳಿಂದ ಯಾವುದೇ ರೋಗ ಬರಲ್ಲ. ಜನರು ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಡಾ. ಶಶಿಧರ ನಾಡಗೌಡ ಸ್ಪಷ್ಟಪಡಿಸಿದರು.