ಮಂಡ್ಯ ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ (Mysugar factory) ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಸೆಪ್ಟೆಂಬರ್ 10 ರೊಳಗೆ ಮಂಡ್ಯ ಮೈಶುಗರ್ ಕಾರ್ಖಾನೆ ಪುನಾರಂಭವಾಗಲಿದೆ ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 10 ರೊಳಗೆ ಮೈಶುಗರ್ ಕಾರ್ಖಾನೆ ಪುನಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಮೂಲಕ ಮಂಡ್ಯ ಜಿಲ್ಲೆಯ ರೈತರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.
ಯಂತ್ರೋಪಕರಣಗಳು ಕೆಟ್ಟು ಹೋಗಿದ್ದ ಹಿನ್ನೆಲೆ 4 ವರ್ಷಗಳಿಂದ ಮೈಶುಗರ್ ಕಾರ್ಖಾನೆ ಮುಚ್ಚಿತ್ತು. ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಸಾಕಷ್ಟು ಹೋರಾಟಗಳು ನಡೆದಿದ್ದು, ಹೋರಾಟಕ್ಕೆ ಮಣಿದು ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಭರವಸೆ ನೀಡಿತ್ತು. ಸರ್ಕಾರದ ಭರವಸೆಯಂತೆ ಪುನರಾರಂಭಕ್ಕೆ ಮೈಶುಗರ್ ಸಜ್ಜಾಗಿದ್ದು, ಮಂಡ್ಯ ಜಿಲ್ಲೆಯ ರೈತರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ.