ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಿರುವಾಗ ಇಂದು ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಘೋರ ದುರಂತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ , ಇದುವರೆಗೂ 6 ಜನರ ಮೃತದೇಹ ಗಳು ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇನ್ನು ಈ ಘಟನೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಲಕ್ಷ್ಮಣ್ ನಾಯ್ಕ್, ಪತ್ನಿ ಶಾಂತಿ, ಪುತ್ರಿ ಆವಾತಿಕಾ ಹಾಗೂ ಪುತ್ರ ರೋಷನ್(11) ಸೇರಿ ಟ್ರಕ್ ಚಾಲಕನ ಶವ ಪತ್ತೆಯಾಗಿದೆ. ಈ ನಾಲ್ವರ ಮೃತದೇಹಗಳು ಗೋಕರ್ಣ ಸಮೀಪ ಸಿಕ್ಕಿದೆ. ಇನ್ನು ಕುಮಟಾ ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿ ಮೃತ ದೇಹ ಇಡಲಾಗಿದೆ.
ಇನ್ನು ಈ ಗುಡ್ಡ ಕುಸಿತ ಸ್ಥಳದಲ್ಲಿ ಮೊದಲು ಓರ್ವ ಮಹಿಳೆ ಶವ ಪತ್ತೆಯಾಗಿತ್ತು. ಬಳಿಕ ಐದು ಜನರ ಮೃತದೇಹ ಸಿಕ್ಕಿತ್ತು. ಇದರಲ್ಲಿ ಒಂದೇ ಕುಟುಂಬದ ನಾಲ್ವರು ಮೃತರಾದರೆ, ಇನ್ನುಳಿದ ಇರ್ವರು ಯಾರು ಎಂಬುವುದು ಗುರುತು ಸಿಗುತ್ತಿಲ್ಲ. ಇದೀಗ ಕೊನೆಗೂ ದರ್ಘಟನಾ ಸ್ಥಳಕ್ಕೆ ಹಿಟಾಚಿ ಬಂದಿದ್ದು, ಮಣ್ಣು ತೆರವು ಕಾರ್ಯ ಮಾಡುತ್ತಿದೆ.
ಘಟನೆಯಲ್ಲಿ ಒಂದೇ ಕುಟುಂಬದ ಐವರು ಸೇರಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗುಡ್ಡ ಕುಸಿತದಲ್ಲಿ ಎರಡು ಮನೆಯ ಮೇಲೆ ಗುಡ್ಡ ಕುಸಿದಿದೆ. ನದಿಯಲ್ಲಿ ಎರಡು ಗ್ಯಾಸ್ ಟ್ಯಾಂಕರ್ ಕೊಚ್ಚಿ ಹೋಗಿದೆ. ಒಂದು ಗ್ಯಾಸ್ ಟ್ಯಾಂಕರ್ ಸೇಫ್ ಆಗಿ ಗುಡ್ಡದ ಪಕ್ಕ ಇದೆ. ನದಿಯಲ್ಲಿ ಕೊಚ್ಚಿ ಹೋಗಿರುವ ಟ್ಯಾಂಕರ್ ಲೀಕ್ ಆಗಿಲ್ಲ. ನದಿಯಲ್ಲಿರುವ ಗ್ಯಾಸ್ ಟ್ಯಾಂಕರ್ ಅನ್ನು ಹೊರ ತೆಗೆಯುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಹೇಳಿಕೆ ನೀಡಿದ್ದಾರೆ.