ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮುರುಘಾಶ್ರೀಗೆ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಕೋರ್ಟ್ ಆದೇಶದ ಪ್ರತಿ ಜಿಲ್ಲಾ ಕಾರಾಗೃಹ ಅಧಿಕಾರಿಗಳ ತಲುಪಿದ್ದರಿಂದ ಚಿತ್ರದುರ್ಗದ ಜೈಲಿನಿಂದ ಮುರುಘಾ ಶ್ರೀಗಳು ಬಿಡುಗಡೆಯಾಗಿದ್ದಾರೆ.
ಹೌದು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾಶ್ರೀ ಅವರನ್ನು ಬಿಡುಗಡೆಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಸಾಕ್ಷ್ಯಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.
ಜೈಲಿನಿಂದ ರಿಲೀಸ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರ ಆಶೀರ್ವಾದದಿಂದ ಜೈಲಿನಿಂದ ಬಿಡುಗಡೆ ಆಗಿದ್ದೇನೆ. ಇದೀಗ ದಾವಣಗೆರೆ ಶಿವಯೋಗಿ ಆಶ್ರಮಕ್ಕೆ ತೆರಳುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರ ಮಾಡಿ ಮುಂದೆ ಹೆಜ್ಜೆ ಇಡುತ್ತೇನೆ. ಕಾನೂನು ಹೋರಾಟ ನಡೆಯುತ್ತಿದ್ದು ಸದ್ಯಕ್ಕೆ ಜಯ ಸಿಗಬಹುದು ಎಂಬ ನಿರೀಕ್ಷೆ ಇದೆ.ಇದು ಮೌನವಹಿಸುವಂತಹ ಕಾಲವಾಗಿದೆ ಎಂದು ತಿಳಿಸಿದರು.
ಈ ಹಿಂದೆ ಫೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು. ಜಾಮೀನು ರದ್ದು ಕೋರಿ ಸಂತ್ರಸ್ತೆ ಪರವಾಗಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುರುಘಾಶ್ರೀ ಅವರ ಜಾಮೀನು ರದ್ದುಗೊಳಿಸಿತ್ತು. ಸಾಕ್ಷಗಳ ವಿಚಾರಣೆ ಮುಗಿಯುವವರೆಗೆ ಮುರುಘಾಶ್ರೀ ಬಂಧನದಲ್ಲಿರಲು ಸುಪ್ರೀಂಕೋರ್ಟ್ ಸೂಚಿಸಿತ್ತು.
ಇಂದಿಗೆ 13 ಮುಖ್ಯ ಸಾಕ್ಷಗಳ ವಿಚಾರಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಮುರುಘಾಶ್ರೀ ಅವರ ಬಿಡುಗಡೆಗೆ ನ್ಯಾಯಾಲಯ ಆದೇಶ ನೀಡಿದೆ ಎಂದು ಮುರುಘಾಶ್ರೀ ಪರ ವಕೀಲ ಕೆ. ವಿಶ್ವನಾಥಯ್ಯ ಹೇಳಿದರು. ಅದರಂತೆ ಇದೀಗ ಚಿತ್ರದುರ್ಗದ ಜೈಲಿನಿಂದ ಮುರುಘಾ ಶ್ರೀಗಳು ಬಿಡುಗಡೆಯಾಗಿದ್ದಾರೆ. ಇದೀಗ ಅವರು ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.