ಚಿಕ್ಕಮಗಳೂರು : ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಪುರಾತನ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಹಿರೇಮಗಳೂರು ಕಣ್ಣನ್ ಅವರಿಗೆ ವೇತನ ಹಿಂತಿರುಗಿಸುವಂತೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಇದೀಗ, ಈ ನೋಟಿಸ್ ಹಿಂಪಡೆಯುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಸ್ಥಳೀಯ ತಹಶೀಲ್ದಾರ್ ಅವರ ತಪ್ಪು ತೀರ್ಮಾನದಿಂದ ನೋಟಿಸ್ ಜಾರಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ 10 ವರ್ಷಗಳಿಂದ ಕಣ್ಣನ್‌ಗೆ ನಿಗದಿಗಿಂತ ಹೆಚ್ಚುವರಿಯಾಗಿ ಗೌರವಧನ ಪಾವತಿಯಾಗಿದೆ. ಆಡಿಟಿಂಗ್ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ 4.74 ಲಕ್ಷ ರೂ.ಗಳನ್ನು ದೇವಾಲಯದ ಖಾತೆಗೆ ಮರುಪಾವತಿಸುವಂತೆ ಸೂಚಿಸಲಾಗಿದೆ ಎನ್ನುವುದು ತಹಸೀಲ್ದಾರ್ ಸಮಜಾಯಿಷಿ.
2017ಕ್ಕಿಂತ ಮೊದಲು ಮಾಸಿಕ 2 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿತ್ತು. 2017ರಿಂದ ಗೌರವ ಧನವನ್ನು 4 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಕಣ್ಣನ್‌ಗೆ 2013ರಿಂದಲೂ ಮಾಸಿಕ 7,500 ರೂ. ನೀಡಲಾಗುತ್ತಿದೆ. ಹೀಗಾಗಿ 2013ರಿಂದ 2017ರವರೆಗೆ ಪ್ರತಿವರ್ಷ 66 ಸಾವಿರ ರೂ. ಹೆಚ್ಚುವರಿ ಗೌರವಧನ ನೀಡಲಾಗಿದೆ. ಹೀಗಾಗಿ ಹೆಚ್ಚುವರಿ ಬಾಬು 4.74 ಲಕ್ಷ ರೂ.ಗಳನ್ನು ಕೂಡಲೇ ತುಂಬುವಂತೆ ಸೂಚನೆ ನೀಡಲಾಗಿದೆ.
ಹಿರೇಮಗಳೂರು ಕಣ್ಣನ್ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ನಿತ್ಯವೂ ಸೀತಾ, ರಾಮ, ಲಕ್ಷ್ಮಣರಿಗೆ ಕನ್ನಡದಲ್ಲೇ ಮಂತ್ರಘೋಷಗಳಿಂದ ಪೂಜೆ ಸಲ್ಲಿಸುವುದು ವಿಶೇಷ. ರಾಜ್ಯ, ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ.