ಬೆಂಗಳೂರು: ರಾಜ್ಯ ಸರ್ಕಾರದಿದಂ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸ್ವೀಕೃತಗೊಂಡ ದೂರುಗಳ ಮೇಲೆ ಕೈಗೊಳ್ಳಬೇಕಾದಂತ ಕ್ರಮಗಳಿಗೆ ಕಾಲಮಿತಿಯನ್ನು ನಿಗದಿಗೊಳಿಸಿ ಆದೇಶಿಸಿದೆ. ಈ ಮೂಲಕ ಸರ್ಕಾರಿ ನೌಕರರ ವಿರುದ್ಧದ ದೂರುಗಳಿಗೆ ಇಂತಿಷ್ಟು ಕಾಲ ಮಿತಿಯಲ್ಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೂ, ಇನ್ಮುಂದೆ ಸರ್ಕಾರಿ ನೌಕರರ ವಿರುದ್ಧ ಕ್ರಮ ಫಿಕ್ಸ್ ಆದಂತೆ ಆಗಿದೆ.
ಈ ಕುರಿತಂತೆ ಕಲಬುರ್ಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಸಾರ್ವಜನಿಕರಿಂದ, ಜನಪ್ರತಿನಿಧಿಗಳಿಂದ ಅಥವಾ ಸಂಘ-ಸಂಸ್ಥೆಗಳಿಂದ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಸ್ವೀಕೃತಗೊಂಡ ದೂರುಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಲ್ಲೇಖಿತ ನಿಯಮಗಳಡಿಯಲ್ಲಿ ಸ್ಪಷ್ಟಪಡಿಸಲಾಗಿರುತ್ತದೆ. ಇಂತಹ ದೂರುಗಳು ಕೆಲವು ಸಂದರ್ಭಗಳಲ್ಲಿ ವೈಯುಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಾಗ್ರಹ ಪೀಡಿತವಾಗಿರುತ್ತವೆ. ಅಲ್ಲದೆ ದೂರುಗಳಿಗೆ ಪೂರಕವಾದ ಮಾಹಿತಿ/ ದಾಖಲೆಗಳನ್ನು ಸಾಮಾನ್ಯವಾಗಿ ಲಭ್ಯಪಡಿಸಿರುವುದಿಲ್ಲ. ಇಂತಹ ದೂರುಗಳಿಂದಾಗಿ ಸರ್ಕಾರಿ ಅಧಿಕಾರಿ/ ನೌಕರರ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗುವುದಲ್ಲದೇ ದಕ್ಷ ಹಾಗೂ ಪ್ರಾಮಾಣಿಕ ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಈ ದೂರುಗಳನ್ನು ಸಮಂಜಸವಾಗಿ ನಿರ್ವಹಿಸದೇ ಇರುವುದರಿಂದ, ಸರ್ಕಾರಿ ನೌಕರರು ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಕಾರಣ, ಮುಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಸ್ವೀಕೃತಗೊಂಡ ದೂರುಗಳ ಮೇಲೆ ಈ ಕೆಳಗೆ ತಿಳಿಸಿರುವಂತೆ ಹಂತವಾರು ಕ್ರಮ ಕೈಗೊಳ್ಳಲು ಈ ಮೂಲಕ ತಿಳಿಸಿದೆ.
ಕಾರಣ, ಮುಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಸ್ವೀಕೃತಗೊಂಡ ದೂರುಗಳ ಮೇಲೆ ಈ ಕೆಳಗೆ ತಿಳಿಸಿರುವಂತೆ ಹಂತವಾರು ಕ್ರಮ ಕೈಗೊಳ್ಳಲು ಈ ಮೂಲಕ ತಿಳಿಸಿದ್ದಾರೆ.
ಹಂತ-1: ದೂರು ಸ್ವೀಕಾರವಾಗುವ ವಿವಿಧ ವಿಧಗಳು.
1) ಮೌಖಿಕವಾಗಿ ಬಂದ ದೂರುಗಳು.
ಸ್ವೀಕರಿಸಿರುತ್ತಾರೆ.
2) ಲಿಖಿತವಾಗಿ ಬಂದ ದೂರಗಳು, ಲಿಖಿತವಾಗಿ ಬಂದಲ್ಲಿ, ದೂರುದಾರರ ಹೆಸರು ಹಾಗೂ ಸಂಪರ್ಕ ಮಾಹಿತಿ ಕೂಡಿದ ದೂರುಗಳನ್ನು ಪರಿಶೀಲಿಸಿತಕ್ಕದ್ದು.
3) ಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮದಲ್ಲಿ ಬಂದಂತಹ ದೂರುಗಳು.
4) ಸಾರ್ವಜನಿಕರಾಗಿರಬಹುದು ಅಥವಾ ಸರ್ಕಾರಿ ಅಧಿಕಾರಿ/ ನೌಕರರಾಗಿರಬಹುದು ವಾಟ್ಸಪ್/ ಇ-ಮೇಲ್ ಮುಖಾಂತರ ನೀಡಿದ ದೂರುಗಳು.
5) ಸಕ್ಷಮ ಪ್ರಾಧಿಕಾರಿಗಳು ಅಧೀನ ಕಛೇರಿಗಳಿಗೆ ಖುದ್ದಾಗಿ ಭೇಟಿ ನೀಡಿದಾಗ, ನ್ಯೂನತೆಗಳನ್ನು ಗಮನಿಸಿದಂತಹ ಪ್ರಕರಣಗಳಲ್ಲಿ ತಕ್ಷಣವೇ ಕರ್ತವ್ಯ ಲೋಪವೆಂದು ಪರಿಗಣಿಸಬಹುದಾಗಿದೆ.
ಮೇಲ್ಕಂಡಂತೆ ಸ್ವೀಕಾರವಾದಂತಹ ದೂರಿನ ಅಂಶವನ್ನು ನಿಯಮಾನುಸಾರ ಮುಂಬರುವ ಹಂತಗಳನ್ನು ಪಾಲಿಸುತ್ತಾ ಪರಿಶೀಲಿಸುವುದು. ಹಾಗೂ ಸಂಬಂಧಿಸಿದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆಯದೆ, ಸದರಿ ದೂರಿನಾಂಶವನ್ನು ಕೂಡಲೇ ಪರಿಶೀಲನೆಗೆ ಒಳಪಡಿಸತಕ್ಕದ್ದು.
ಹಂತ-2: ದೂರಿನಲ್ಲಿನ ಅಂಶಗಳಲ್ಲಿ ನಿಯಮಗಳ ಉಲ್ಲಂಘನೆಯಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳತಕ್ಕದ್ದು.
ದೂರಿನಲ್ಲಿರುವಂತೆ ಸದರಿ ಲೋಪದಿಂದ ಯಾವ ನಿಯಮವು ಉಲ್ಲಂಘನೆಯಾಗಿದೆ ಎಂಬುದನ್ನು ಪರಿಶೀಲಿಸತಕ್ಕದ್ದು
ಉದಾರಹಣೆ: (ಕಾಲ್ಪನಿಕ ಸನ್ನಿವೇಶ) ದಿನಾಂಕ: 16/08/2023 ರಂದು ಬಂಡೂರು ಗ್ರಾಮಸ್ಥರು ಉಪ ನಿರ್ದೇಶಕರು, ಯಾದಗಿರಿ ರವರ ಕಛೇರಿ ತಲುಪಿ ತಮ್ಮ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲೀಲಾವತಿ ರವರ ಮೇಲೆ ದೂರೊಂದನ್ನು ನೀಡುತ್ತಾರೆ. ದೂರಿನ ವಿಷಯವೆಂದರೆ ಸದರಿ ಮುಖ್ಯ ಶಿಕ್ಷಕರು ದಿನಾಂಕ: 15/08/2023ರ ಸ್ವಾತಂತ್ರ ದಿನಾಚರಣೆಯಂದು ನೇತಾಜಿ ಸುಭಾಸ್ ಚಂದ್ರ ಬೋಸ್ ರವರ ಭಾವಚಿತ್ರವನ್ನು ಇಟ್ಟು ಪೂಜಿಸದೇ ಅವರಿಗೆ ಅಗೌರವ ತೋರಿರುತ್ತಾರೆ ಎಂಬುವುದಾಗಿರುತ್ತದೆ. ಭಾವನಾತ್ಮಕವಾಗಿ ಪುಚೋದನೆಗೊಂಡಿರುವ ಈ ಗುಂಪಿಗೆ ಅಂಜಿ ಆ ಉಪ ನಿರ್ದೇಶಕರು, ಸದರಿ ಮುಖ್ಯ ಶಿಕ್ಷಕರನ್ನು ಗ್ರಾಮಸ್ಥರ ಬೇಡಿಕೆಯಂತೆ ತಕ್ಷಣವೇ ಅಮಾನತ್ತುಗೊಳಿಸುತ್ತಾರೆ. ಆದರೆ, ವಿಷಯವನ್ನರಿತ ಮೇಲಾಧಿಕಾರಿಗಳು ಸದರಿ ಲೋಪವೆಂಬಂಥಹ ಘಟನೆಯಿಂದ ಯಾವ ನಿಯಮದ/ ಸುತ್ತೋಲೆ/ ಜ್ಞಾಪನದ ನಿರ್ದೇಶನಗಳ ಉಲ್ಲಂಘನೆಯಾಗಿದೆ ? ಎಂದು ಕೇಳಲಾಗಿ ಉಪ ನಿರ್ದೇಶಕರಿಗೆ ಇದಕ್ಕೆ ಉತ್ತರ ದೊರೆಯದೆ ಆತುರದ ನಿರ್ಧಾರದ ಅರಿವಾಗುತ್ತದೆ.
ಹಂತ-3: ಸಕ್ಷಮ ಪ್ರಾಧಿಕಾರವನ್ನು ಗುರುತಿಸುವುದು.
ಬಂದಂತಹ ದೂರಿಗೆ ಸಕ್ಷಮ ಪ್ರಾಧಿಕಾರಿಗಳು ಯಾರು? ಎಂಬುದನ್ನು ಖಚಿತ ಪಡಿಸಿಕೊಂಡು ಅವರ ಹಂತದಲ್ಲಿಯೇ ಇತ್ಯರ್ಥ ಪಡಿಸಲು ಕ್ರಮವಹಿಸಬೇಕು. ಆದ್ದರಿಂದ ವಿನಾಕಾರಣ ಉದ್ದೇಶಪೂರ್ವಕವಾಗಿ ಮೇಲಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡತಕ್ಕದ್ದಲ್ಲ.
ಉದಾರಹಣೆ: (ಕಾಲ್ಪನಿಕ ಸನ್ನಿವೇಶ) ಮೇಲ್ಕಂಡ ಉದಾಹರಣೆಯಲ್ಲಿ ಉಪ ನಿರ್ದೇಶಕರು, ಯಾದಗಿರಿ ರವರು ತಮ್ಮ ಹಂತದಲ್ಲಿ ಕ್ರಮವಹಿಸದೆ, ಅಪರ ಆಯುಕ್ತರಿಗೆ ದೂರನ್ನು ವರ್ಗಾಯಿಸಿದರೆ ಅದು ತಪ್ಪಾಗುತ್ತದೆ. ಕೇತ್ರ ಶಿಕ್ಷಣಾಧಿಕಾರಿಗಳಿಂದ ಅವಶ್ಯಕವಿದ್ದಲ್ಲಿ ಕೇವಲ ವರದಿಯನ್ನಷ್ಟೇ ಪಡೆದು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಶಿಸ್ತು ಪ್ರಾಧಿಕಾರಿಯಾದ ಉಪ ನಿರ್ದೇಶಕರೇ ತಮ್ಮ ಹಂತದಲ್ಲಿ ಕ್ರಮವಹಿಸಬೇಕು. ಅಥವಾ ಸಂಬಂಧಿಸಿದ ಶಿಸ್ತು ಪ್ರಾಧಿಕಾರಿಗೆ ದೂರನ್ನು ತಲುಪಿಸಬೇಕು.
ಹಂತ-4: ಕಾರಣ ಕೇಳುವ ನೋಟಿಸ್ ಜಾರಿ ಮಾಡುವುದು.
ಯಾವುದೇ ದೂರು ಬಂದಾಗ ಸಕ್ಷಮ ಪ್ರಾಧಿಕಾರಿಗಳು ಮಾನದಂಡಗಳನ್ವಯ ಕಾರಣ ಕೇಳುವ ನೋಟಿಸ್ ನೀಡುವಾಗ ಕೆಳಕಂಡ ಅಂಶಗಳನ್ನು ಪಾಲಿಸುವುದು.
1) ದೂರು ಯಾವ ಮೂಲದಿಂದ (ಲಿಖಿತ ಪತ್ರಿಕಾ ಪ್ರಕಟಣೆ/ ವಾಟ್ಸಪ್/ ಇ-ಮೇಲ್/ ದೃಶ್ಯ ಮಾಧ್ಯಮ) ಬಂದಿದೆ ? ಎಂಬುದನ್ನು ಕಾರಣ ಕೇಳುವ ನೋಟಿಸ್ ನಲ್ಲಿ ನಮೂದಿಸುವುದು.
2) ಕಾರಣ ಕೇಳುವ ನೋಟಿಸ್‌ನಲ್ಲಿ ಉತ್ತರಿಸಲು ಕಡ್ಡಾಯವಾಗಿ ‘ಎರಡು ವಾರ ಕಾಲಾವಕಾಶ’ ನೀಡತಕ್ಕದ್ದು. ತುರ್ತು ಅಥವಾ ಸೂಕ್ಷ್ಮ ವಿಷಯಗಳ ಕುರಿತು ದೂರುಗಳಿದ್ದಲ್ಲಿ ವಿಷಯದ ಸೂಕ್ಷ್ಮತೆಯ ಅನುಗುಣವಾಗಿ ಶಿಸ್ತು ಪ್ರಾಧಿಕಾರಿಗಳ, ವಿವೇಚನೆಯಂತೆ ಎರಡು ವಾರಗಳಿಗಿಂತ ಕಡಿಮೆ ಕಾಲಾವಕಾಶ ನೀಡತಕ್ಕದ್ದು.
3) ದೂರು ಒಬ್ಬರಿಗಿಂತ ಹೆಚ್ಚು ಅಧಿಕಾರಿ/ ನೌಕರರ ಮೇಲೆ ಇದ್ದಲ್ಲಿ ಪ್ರತ್ಯೇಕವಾದ ಕಾರಣ ಕೇಳುವ ನೋಟಿಸ್ ನೀಡತಕ್ಕದ್ದು. ಯಾವುದೇ ಕಾರಣಕ್ಕಾಗಿಯೂ ಎಲ್ಲರನ್ನು ಸೇರಿಸಿ ಒಂದೇ ಕಾರಣ ಕೇಳುವ ನೋಟಿಸ್ ನೀಡತಕ್ಕದ್ದಲ್ಲ. ಈ ಕಾರಣ ಕೇಳುವ ನೋಟಿಸ್‌ನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳತಕ್ಕದ್ದಲ್ಲ.
4) ಸಂಬಂಧಿಸಿದವರಿಗೆ ವೈಯುಕ್ತಿಕವಾಗಿ ವಾಟ್ಸಪ್ ಇ-ಮೇಲ್/ ದೂರವಾಣಿ ಕರೆ ಮಾಡುವುದರ ಮೂಲಕ ಕಾರಣ ಕೇಳುವ ನೋಟಿಸ್‌ನ್ನು ಜಾರಿ ಮಾಡಬಹುದಾಗಿದೆ.
5) ಸಕ್ಷಮ ಪ್ರಾಧಿಕಾರಿಗಳು ಸ್ವಯಂ ಗಮನಿಸಿದ ತುರ್ತು ಅಥವಾ ಸೂಕ್ಷ್ಮ ವಿಷಯಗಳಿದ್ದಲ್ಲಿ ಲೋಪವೆಸಗಿರುವ ಅಧಿಕಾರಿ/ ನೌಕರನಿಗೆ ಕಾರಣ ಕೇಳುವ ನೋಟಿಸ್ ನೀಡಿ, ಉತ್ತರ ಪಡೆಯುವವರೆಗೆ ಶಿಸ್ತುಕ್ರಮ ಜರುಗಿಸಲು ಕಾಯಬೇಕಿಲ್ಲ.
6) ಸಾರ್ವಜನಿಕ ಅಥವಾ ಖಾಸಗಿ ವ್ಯಕ್ತಿಗಳು ದೂರು ನೀಡಿದ ಪುಕರಣಗಳಲ್ಲಿ, ಸಂಬಂಧಿಸಿದವರಿಗೆ ನೀಡಿದ ಕಾರಣ ಕೇಳುವ ನೋಟಿಸ್ ಅಥವಾ ದೂರುದಾರರಿಗೆ ಯಾವುದೇ ಹಂತದ ವಿಚಾರಣೆ ನಡೆಸುತ್ತಿರುವ ಪತ್ರ ವ್ಯವಹಾರದ ಪತ್ರದ ಪ್ರತಿಯೋರ್ವರಿಗೂ ಒಂದು ಪ್ರತಿಯನ್ನು ನೀಡತಕ್ಕದ್ದು.
7) ಮೇಲಾಧಿಕಾರಿಗಳು ವಾಟ್ಸಪ್ ಅಥವಾ ಲಿಖಿತ ರೂಪದಲ್ಲಿ ದೂರಿನ ಬಗ್ಗೆ ಸಕ್ಷಮ ಪ್ರಾಧಿಕಾರಿಗಳಿಗೆ ಕಳುಹಿಸಿದಾಗ, ಸಕ್ಷಮ ಪ್ರಾಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಒಂದು ಪ್ರತಿಯನ್ನು ಯಾವ ಮೇಲಾಧಿಕಾರಿಗಳು ಕಳುಹಿಸಿರುತ್ತಾರೆಯೋ, ಅವರಿಗೆ ಕಳುಹಿಸತಕ್ಕದ್ದು.
ಹಂತ-5: ಉತ್ತರ ಸಿಗದೇ ಇದ್ದ ಪಕ್ಷದಲ್ಲಿ, ಎರಡನೇ ಅವಕಾಶ ನೀಡತಕ್ಕದ್ದು.
ಕಾರಣ ಕೇಳುವ ನೋಟಿಸ್ ಪಡೆದಂತಹ ಅಧಿಕಾರಿ/ ನೌಕರರುಗಳಿಂದ ಮೊದಲನೇ ನೋಟಿಸ್‌ಗೆ ಲಿಖಿತ ಉತ್ತರ ಸಿಗದೇ ಇದ್ದ ಪಕ್ಷದಲ್ಲಿ ಅಂತಹ ಅಧಿಕಾರಿ/ ನೌಕರರಿಗೆ ಎರಡನೇ ಅವಕಾಶ ನೀಡತಕ್ಕದ್ದು.
1) ಕಾರಣ ಕೇಳುವ ನೋಟಿಸಿಗೆ ಉತ್ತರಿಸಲು ಎರಡು ವಾರ ಕಾಲಾವಕಾಶ ನೀಡಿದ್ದಾಗಿಯೂ ಸಹ ನಿಗದಿತ ಅವಧಿಯಲ್ಲಿ ಲಿಖಿತ ಉತ್ತರ ಸಲ್ಲಿಸದಿರುವ ಅಧಿಕಾರಿ/ ನೌಕರರಿಗೆ ಎರಡನೇ ಕಾರಣ ಕೇಳುವ ನೋಟಿಸ್ ನೀಡತಕ್ಕದ್ದು.
2) ಎರಡನೇ ಕಾರಣ ಕೇಳುವ ನೋಟಿಸಿಗೆ ಸಂಬಂಧಿಸಿದಂತೆ, ಲಿಖಿತ ಉತ್ತರ ನೀಡಲು ಸಂಬಂಧಿಸಿದ ಅಧಿಕಾರಿ/ನೌಕರರಿಗೆ ಪುನಃ ಎರಡು ವಾರಗಳ ಕಾಲಾವಕಾಶ ನೀಡತಕ್ಕದ್ದು. ತುರ್ತು ಅಥವಾ ಸೂಕ್ಷ್ಮ ವಿಷಯಗಳ ಕುರಿತು ದೂರುಗಳಿದ್ದಲ್ಲಿ ವಿಷಯದ ಸೂಕ್ಷ್ಮತೆಯ ಅನುಗುಣವಾಗಿ ಶಿಸ್ತು ಪ್ರಾಧಿಕಾರಿಗಳ, ವಿವೇಚನೆಯಂತೆ ಎರಡು ವಾರಗಳಿಗಿಂತ ಕಡಿಮೆ ಕಾಲಾವಕಾಶ ನೀಡತಕ್ಕದ್ದು.
ಹಂತ-6: ‘ನಿಯಮ’ ಹಾಗೂ ‘ಉದ್ದೇಶ’ ಗಳ ಕುರಿತಾದ ಮೌಲ್ಯಮಾಪನ ಮಾಡುವುದು.
ಕಾರಣ ಕೇಳುವ ನೋಟಿಸಿಗೆ ನೀಡಿದ ಉತ್ತರವನ್ನು ನಿಯಮಗಳಡಿಯಲ್ಲಿ ಮೌಲ್ಯಮಾಪನ ಮಾಡುವುದು.
1) ಕಾರಣ ಕೇಳುವ ನೋಟಿಸಿಗೆ ಸಂಬಂಧಿಸಿದ ಅಧಿಕಾರಿ/ ನೌಕರರುಗಳು ನೀಡಿದ ಉತ್ತರವು ನಿಯಮಗಳಡಿಯಲ್ಲಿ ಸಮರ್ಥನೆ ಹೊಂದಿರುವ ಬಗ್ಗೆ ಅಥವಾ ಇಲ್ಲದಿರುವ ಬಗ್ಗೆ ಪರಿಶೀಲಿಸತಕ್ಕದ್ದು.
2) ಲಿಖಿತ ಉತ್ತರದಲ್ಲಿ ‘ಉದ್ದೇಶ’ಪೂರ್ವಕವಾಗಿ ತಪ್ಪು ಮಾಡಿದ್ದಾರೆಯೇ? ಎಂಬುವುದನ್ನು ಪರಿಶೀಲಿಸತಕ್ಕದ್ದು.
3) ಅಧಿಕಾರಿ/ ನೌಕರರುಗಳು ನೀಡಿದ ಉತ್ತರದಲ್ಲಿ ನಿಯಮಗಳಡಿಯಲ್ಲಿ ಸಮರ್ಥನೆ ಇಲ್ಲ ಹಾಗೂ ದುರುದ್ದೇಶಪೂರಿತ ಎಂದು ಮೇಲ್ನೋಟಕ್ಕೆ ಕಂಡುಬಂದ ಪಕ್ಷದಲ್ಲಿ ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸಲು ಕ್ರಮವಹಿಸುವುದು.
4) ಅಧಿಕಾರಿ/ ನೌಕರರುಗಳು ನೀಡಿದ ಉತ್ತರವು ನಿಯಮಗಳಡಿಯಲ್ಲಿ ಸಮರ್ಥನೆ ಮಾಡಿಕೊಳ್ಳುವಂತಹದ್ದಾಗಿದ್ದು ಹಾಗೂ ದುರುದ್ದೇಶಪೂರಿತ ಅಲ್ಲ ಎಂದು ಕಂಡುಬಂದ ಪಕ್ಷದಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು. ಪುಕರಣ ಮುಕ್ತಾಗೊಳಿಸಿದ ಆದೇಶದ ಪ್ರತಿಯಲ್ಲಿ ದೂರುದಾರರಿಗೆ ಒಂದು ಪ್ರತಿಯನ್ನು ಕಳುಹಿಸಿ ಪ್ರಕರಣ ಮುಕ್ತಾಯಗೊಳಿಸಿರುವ ಬಗ್ಗೆ ತಿಳಿಸುವುದು. ಒಂದು ವೇಳೆ ಮೇಲಾಧಿಕಾರಿಗಳ ಕಛೇರಿಗಳಿಂದ ದೂರಿನ ಪ್ರತಿ ಬಂದಿದ್ದಲ್ಲಿ, ಮುಕ್ತಾಯಗೊಳಿಸಿದ ಆದೇಶವನ್ನು ಮೇಲಾಧಿಕಾರಿಗಳ ಕಛೇರಿಗಳಿಗೆ ಒಂದು ಪ್ರತಿಯನ್ನು ಕಳುಹಿಸಿ ಪಕರಣ ಮುಕ್ತಾಯಗೊಳಿಸಿರುವ ಬಗ್ಗೆ ತಿಳಿಸುವುದು.
ವಿಚಾರಣೆ.
ಹಂತ-7: ಉತ್ತರವು ಸಕ್ಷಮ ಪ್ರಾಧಿಕಾರಿಗಳಿಗೆ ಮನವರಿಕೆಯಾಗದಿದ್ದ ಪಕರಣದಲ್ಲಿ ಪ್ರಾಥಮಿಕ ವಿಚಾರಣೆ
ಕಾರಣ ಕೇಳುವ ನೋಟಿಸಿಗೆ ನೀಡಿದ ಉತ್ತರವು ಸಕ್ಷಮ ಪ್ರಾಧಿಕಾರಿಗಳಿಗೆ ಮನವರಿಕೆಯಾಗದಿದ್ದ ಪ್ರಕರಣದಲ್ಲಿ ದೂರಿನ ಕುರಿತು ಪ್ರಾಥಮಿಕ ವಿಚಾರಣೆಯನ್ನು ನಡೆಸುವುದು.
1) ಪ್ರಾಥಮಿಕ ವಿಚಾರಣೆ ನಡೆಸಲು ವಹಿಸಿಕೊಟ್ಟ ಅಧಿಕಾರಿಯು ಸಂಬಂಧಪಟ್ಟವರನ್ನು ತಮ್ಮ ಕಛೇರಿಗೆ ನೋಟಿಸ್ ನೀಡಿ, ಕರೆಯಿಸಿ ಕಛೇರಿ ಹಂತದಲ್ಲಿಯೇ ವಿಚಾರಣೆ ನಡೆಸಬಹುದಾಗಿದೆ. 2) ಪಾಥಮಿಕ ವಿಚಾರಣೆ ನಡೆಸಲು ವಹಿಸಿಕೊಟ್ಟ ಅಧಿಕಾರಿಯು ಸಂಬಂಧಪಟ್ಟ ಕ್ಷೇತ್ರಕ್ಕೆ ಖುದ್ದಾಗಿ ಹೋಗಿ ವಿಚಾರಣೆ ನಡೆಸುವುದು. ಆದರೆ, ದೂರುದಾರರ ಸಮ್ಮುಖದಲ್ಲಿಯೇ ನಡೆಸಬೇಕೆಂಬ ಕಾನೂನು ಯಾವ ನಿಯಮಾವಳಿಗಳಲ್ಲಿಯೂ ಇರುವುದಿಲ್ಲ.
3) ಆದಾಗ್ಯೂ, ದೂರುದಾರರಿಂದ ಹೆಚ್ಚಿನ ಮಾಹಿತಿ ಅವಶ್ಯಕತೆ ಇರುವ ಪುಕರಣಗಳಲ್ಲಿ ಮಾತ್ರ ದೂರುದಾರರಿಗೆ ಅಗತ್ಯ ದಾಖಲೆಗಳೊಂದಿಗೆ, ನಿಗದಿತ ಸಮಯದಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ, ಭೌತಿಕ ವಿಚಾರಣೆ ನಡೆಸುವುದು. ಈ ಭೌತಿಕ ವಿಚಾರಣೆಗೆ ನೋಟಿಸ್ ನೀಡಲು ಈ ಕೆಳಕಂಡ ನಿಯಮಗಳನ್ನು ಪಾಲಿಸತಕ್ಕದ್ದು.
ಎ) ದೂರುದಾರರನ್ನು ಒಳಗೊಂಡಂತೆ ಸಂಬಂಧಪಟ್ಟವರಿಗೆ ‘ಎರಡು ವಾರಗಳ ಕಾಲಾವಕಾಶ’ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ತಿಳಿಸತಕ್ಕದ್ದು.
ಬಿ) ವಿಚಾರಣೆ ನಡೆಸುವ ಅಧಿಕಾರಿಯು, ಸಂಬಂಧಪಟ್ಟವರಿಂದ ಪಡೆದ ಮೌಖಿಕ ಹೇಳಿಕೆ ಹಾಗೂ ದಾಖಲೆಗಳ ಮೂಲಕ ಸಲ್ಲಿಸಿದ ಹೇಳಿಕೆಗಳನ್ನು ದಾಖಲಿಸಕೊಳ್ಳತಕ್ಕದ್ದು ಹಾಗೂ ಆರ್ಡರ್ ಶಿಟ್‌ದಲ್ಲಿ ನಮೂದಿಸತಕ್ಕದ್ದು,
ಸಿ) ವಿಚಾರಣೆ ನಡೆಸುವ ಸಮಯದಲ್ಲಿ ಹಾಜರಿದ್ದ, ದೂರುದಾರು, ವಾದಿ-ಪ್ರತಿವಾದಿಗಳ ರುಜುವನ್ನು ಒಂದು ಪ್ರತ್ಯೇಕ ಹಾಜರಾತಿ ವಹಿ ನಿರ್ವಹಿಸಿದ್ದು.
ಹಂತ-8: ಪ್ರಾಥಮಿಕ ವಿಚಾರಣೆ ವರದಿಯ ಮೇಲೆ ನಿರ್ಣಯ.
ಪ್ರಾಥಮಿಕ ವಿಚಾರಣೆಯನ್ನು ನಡೆಸಿ ಸಲ್ಲಿಸಲಾದ ಅಂತಿಮ ವರದಿ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರಿಗಳು ಪಕರಣವನ್ನು ಮುಕ್ತಾಯಗೊಳಿಸಿ ಆದೇಶಿಸಿದಲ್ಲಿ, ಸದರಿ ಆದೇಶದ ಪ್ರತಿಯನ್ನು ದೂರುದಾರರಿಗೆ ನೀಡುವುದು. ಸದರಿ ಆದೇಶದಿಂದ ಬಾಧಿತರಾದಲ್ಲಿ ದೂರುದಾರರು ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ, ಸಕ್ಷಮ ಮೇಲ್ಮನವಿ ಪ್ರಾಧಿಕಾರಿಗಳ ಬಗ್ಗೆ ತಿಳಿಸತಕ್ಕದ್ದು.
ಹಂತ-9: ಪ್ರಾಥಮಿಕ ವಿಚಾರಣೆ ವರದಿಯ ಮೇಲೆ ಶಿಸ್ತು ಕ್ರಮ.
ಪ್ರಾಥಮಿಕ ವಿಚಾರಣೆ ವರದಿಯ ಮೇಲೆ ಶಿಸ್ತು ಕ್ರಮವಾಗಿ ಇಲಾಖಾ ವಿಚಾರಣೆ ನಡೆಸಲು ತೀರ್ಮಾನಿಸಿದ್ದಲ್ಲಿ ಇಲಾಖಾ ವಿಚಾರಣೆ ನಡೆಸಲು ತೀರ್ಮಾನಿಸಿರುವ ಬಗ್ಗೆ ದೂರುದಾರರಿಗೆ ಒಂದು ಪ್ರತಿ ನೀಡುವುದು. ಇದು ದೂರುದಾರರಿಗೆ ನೀಡಬಹುದಾದ ಅಂತಿಮ ಪ್ರತಿಯಾಗಿರುತ್ತದೆ.
ಇಲಾಖಾ ವಿಚಾರಣೆ ಅಗುವಾಗುವವರೆಗೆ ನಂತರದ ಮುಂದಿನ ಹಂತಗಳ ಕುರಿತಾದ ಮಾಹಿತಿಯನ್ನು ದೂರುದಾರರಿಗೆ ತಿಳಿಸುವ ಅಗತ್ಯತೆ ಇರುವುದಿಲ್ಲ.
ಹಂತ-10: ಇಲಾಖಾ ವಿಚಾರಣೆಗೆ ಗರಿಷ್ಠ ಕಾಲಮಿತಿ
ಅ) ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 18 ಸೇಇವಿ 2021 ದಿನಾಂಕ 04.10.2021 ರನ್ವಯ ತಿಳಿಸಿರುವಂತೆ, ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 11ರಡಿ ಕಠಿಣ ದಂಡನೆಯನ್ನು ವಿಧಿಸಲು ಈ ಕೆಳಕಂಡ ಕಾಲಾವಧಿಯನ್ನು ಪಾಲಿಸುವುದು.
- ಸರ್ಕಾರಿ ನೌಕರರ ಅಕ್ರಮಗಳು, ದುರ್ನಡತೆಗಳು ಶಿಸ್ತಿನ ಪ್ರಾಧಿಕಾರದ ಗಮನಕ್ಕೆ ಬಂದ ದಿನಾಂಕದಿಂದ ದೋಷಾರೋಪಣಾ ಪಟ್ಟಿಯನ್ನು ತಯಾರಿಸುವ ಸಲುವಾಗಿ ದಾಖಲೆಗಳನ್ನು ಪಡೆಯಲು ಅಥವಾ ಪ್ರಾರಂಭಿಕ ತನಿಖೆ, ವಿಚಾರಣೆಯನ್ನು ಅಂತಿಮಗೊಳಿಸಲು ಹಾಗೂ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಜಾರಿಗೊಳಿಸಲು 1 ತಿಂಗಳ ಗರಿಷ್ಠ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.
- ದೋಷಾರೋಪಣಾ ಪಟ್ಟಿಗೆ ಸರ್ಕಾರಿ ನೌಕರನ ವಿಚಾರಣೆಯನ್ನು ಪಡೆಯಲು ಹಾಗೂ ವಿಚಾರಣಾ ಅಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸಲು 1 ತಿಂಗಳ ಗರಿಷ್ಠ ಕಾಲಮಿತಿ ನೀಡಿದೆ.
- ವಿಚಾರಣೆಯನ್ನು ನಡೆಸಲು ಹಾಗೂ ವಿಚಾರಣಾ ವರದಿಯನ್ನು ಮಂಡಿಸಲು 4 ತಿಂಗಳ ಗಡುವು ನಿಗದಿಪಡಿಸಲಾಗಿದೆ.
- ವಿಚಾರಣಾ ವರದಿಯನ್ನು ಪರಿಶೀಲಿಸಲು ಹಾಗೂ ಅದನ್ನು ಸ್ವೀಕರಿಸುವ ಬಗ್ಗೆ ನಿರ್ಣಯಿಸಲು 1 ತಿಂಗಳ ಗರಿಷ್ಠ ಕಾಲಮಿತಿ ನೀಡಿದೆ.
- ಕಾರಣ ಕೇಳುವ 2ನೇ ಸೂಚನಾ ಪತ್ರವನ್ನು ವಿಚಾರಣಾ ವರದಿಯ ಜೊತೆಗೆ, ಆಪಾದಿತ ಸರ್ಕಾರಿ ನೌಕರನಿಗೆ ನೀಡಲು 1 ತಿಂಗಳ ಕಾಲಮಿತಿ ನೀಡಲಾಗಿದೆ.
- ಅಂತಿಮ ಆದೇಶವನ್ನು ಹೊರಡಿಸಲು 1 ತಿಂಗಳು ಗರಿಷ್ಠ ಕಾಲಮಿತಿ ನೀಡಲಾಗಿದೆ.
- ಒಟ್ಟಾರೆಯಾಗಿ ಶಿಸ್ತಿನ ಕ್ರಮ ಜರುಗಿಸಲು 9 ತಿಂಗಳ ಗರಿಷ್ಠ ಕಾಲಮಿತಿ ನೀಡಲಾಗಿದೆ. ಈ ಕಾಲಮಿತಿಯೊಳಗೆ ಸರ್ಕಾರಿ ನೌಕರನ ವಿರುದ್ಧ ಬಂದಂತ ದೂರಿನ ಕ್ರಮವಹಿಸಲು ತಿಳಿಸಲಾಗಿದೆ.
ಆ) ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 18 ಸೇಇವಿ 2021 ದಿನಾಂಕ 04.10.2021 ರನ್ವಯ ತಿಳಿಸಿರುವಂತೆ, ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 12ರಡಿ ಶಿಸ್ತು ಕ್ರಮವಹಿಸಲು ಈ ಕೆಳಕಂಡ ಕಾಲಾವಧಿಯನ್ನು ಪಾಲಿಸುವುದು.
- ಆಪಾದಿತ ನೌಕರನು ಸಮಜಾಯಿಸಿ ನೀಡಲು ನಿಯಮ 12ರ ಅಡಿ ನೋಟಿಸ್ ಸ್ವೀಕರಿಸಿದ ದಿನದಿಂದ ಗರಿಷ್ಠ 15 ದಿನಗಳು ಆಗಿವೆ. ಈ ಅವಧಿಯಲ್ಲಿ ಸ್ವೀಕೃತಗೊಳ್ಳದಿದ್ದಲ್ಲಿ ಯಾವುದೇ ಸಮಜಾಯಿಷಿ ಇರುವುದಿಲ್ಲವೆಂದು ಪರಿಭಾವಿಸಿ ಶಿಸ್ತು ಪ್ರಾಧಿಕಾರಿಯು ಮುಂದಿನ ಪ್ರಕ್ರಿಯೆ ಪ್ರಾರಂಭಿಸುವುದು.
- ಶಿಸ್ತು ಪ್ರಾಧಿಕಾರಿಯು ನಿರ್ಣಯ ಕೈಗೊಂಡ ಆದೇಶವನ್ನು ಆಪಾದಿತ ನೌಕರನ ಸಮಜಾಯಿಸಿ ಸ್ವೀಕಾರಗೊಂಡಾಗಿನಿಂದ ಗರಿಷ್ಠ 1 ತಿಂಗಳ ಒಳಗಾಗಿ ಹೊರಡಿಸಲು ಗರಿಷ್ಠ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS: ಸರ್ಕಾರದ ಎಲ್ಲಾ ಇಲಾಖೆ ‘ನಾಮಫಲಕ’ಗಳನ್ನು ‘ಕನ್ನಡ’ದಲ್ಲೇ ಪ್ರದರ್ಶಿಸುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ
‘ಹಾರ್ಡ್ ಡ್ರಿಂಕ್ಸ್’ ಕುಡಿಯೋದಕ್ಕಿಂತ ‘ಬಿಯರ್’ ಕುಡಿಯುವುದು ಆರೋಗ್ಯಕರವೇ? ಇಲ್ಲಿದೆ ಮಾಹಿತಿ