ಬೆಂಗಳೂರು : ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ವೃಂದ ಮತ್ತು ನೇಮಕಾತಿ ನಿಯಮಗಳು ಬೇರೆ ಆಗಿರುವುದರಿಂದ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕ ಹುದ್ದೆ ಮುಂಬಡ್ತಿ ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.
ವಿಧಾನಪರಿಷತ್‍ನ ಪ್ರಶೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು,ಸದಸ್ಯ ರಾಮೋಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರೊ.ಎಲ್.ಆರ್ ವೈದ್ಯನಾಥನ್ ವರದಿ ಆಧರಿಸಿ ದೈಹಿಕ ಶಿಕ್ಷಕರಿಗೆ ಮುಂಬಡ್ತಿ ನೀಡುವುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ದೈಹಿಕ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿದ್ದು, ಇವರ ಪ್ರಾವೀಣ್ಯತೆ ಹಾಗೂ ಅನುಭವ ಆಧಾರದ ಮೇಲೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಸಹಾಯಕ ನಿರ್ದೇಶಕರು, (ದೈಹಿಕ ಶಿಕ್ಷಣ), ಸಹ ನಿರ್ದೇಶಕರು (ದೈಹಿಕ ಶಿಕ್ಷಣ) ಹುದ್ದೆಗಳಿಗೆ ಮುಂಬಡ್ತಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕ ಹುದ್ದೆಗೆ ಮುಂಬಡ್ತಿ ನೀಡಲು ಸಾಧ್ಯವಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಪಪಡಿಸಿದರು.
ವೃಂದ ಮತ್ತು ನೇಮಕಾತಿ ನಿಯಮದಂತೆ ನಿಗದಿಪಡಿಸಿರುವ ವಿದ್ಯಾರ್ಹತೆ ಎಂದರೆ ಪದವಿ ಜೊತೆಗೆ ಶೈಕ್ಷಣಿಕ ಆಡಳಿತಕ್ಕೆ ಅಗತ್ಯ ಇರುವ ಬಿಇಡಿ ಪದವಿ ನಿಗದಿಪಡಿಸಲಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರು ಬಿಇಡಿ ಪದವಿಯನ್ನು ಹೊಂದಿರುವುದಿಲ್ಲ. ಆದ್ದರಿಂದ ಮುಂಬಡ್ತಿ ನೀಡುವುದು ಸಮಸ್ಯೆಯಾಗಿದೆ.ದೈಹಿಕ ಶಿಕ್ಷಕರಿಗೆ ವಿಷಯ ಭೋದನೆ ತರಬೇತಿಯಿಲ್ಲ. ಹೀಗಾಗಿ, ಸಹ ಶಿಕ್ಷಕರ ಅನುಪಸ್ಥಿತಿಯಲ್ಲಿ ವಿಷಯ ಭೋದನೆಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದರು.