ಬೆಂಗಳೂರು : ತಮಿಳುನಾಡಿನಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲು ಬೀರಿದೆ. ಕಳೆದ ಹಲವಾರು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಹಲವಾರು ಅವಾಂತರ ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಕಾಏಕಿ ತರಕಾರಿ ಬೆಲೆ ಏರಿಕೆಯಾಗಿದೆ.
ಹೌದು ಫೆಂಗಲ್ ಚಂಡಮಾರುತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ತರಕಾರಿ ಇಳುವರಿ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಮಾರುಕಟ್ಟೆಗೆ ಪೂರೈಕೆ ಗಣನೀಯವಾಗಿ ಇಳಿದಿದ್ದು, ತರಕಾರಿ ಬೆಲೆ ಗಗನಕ್ಕೇರಿದೆ. ದಿಢೀರ್ ತರಕಾರಿ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ.
ಟೊಮ್ಯಾಟೋ ಕೆಜಿಗೆ 60 ರಿಂದ 70 ಏರಿಕೆಯಾಗಿದೆ, ಅದೇ ರೀತಿಯಾಗಿ ನುಗ್ಗೇಕಾಯಿ 500 ರೂ, ಬಟಾಣಿ, ಕೆಜಿಗೆ 180 ರಿಂದ 200 ರೂ, ಮೆಣಸಿನಕಾಯಿ ಕೆಜಿಗೆ 40 ರಿಂದ 50 ರೂ, ಆಲೂಗಡ್ಡೆ ಕೆಜಿಗೆ 35 ರಿಂದ 40 ರೂ, ಬೀನ್ಸ್ ಕೆಜಿಗೆ 60 ರೂ, ಕ್ಯಾರೆಟ್ ಕೆಜಿಗೆ 60 ರಿಂದ 80 ರೂ, ಹಾಗೂ ಗ್ರೀನ್ ಕ್ಯಾಪ್ಸಿಕ್ಸಂ ಕೆಜಿಗೆ 50 ರೂಪಾಯಿ ಏರಿಕೆ ಕಂಡಿವೆ.
ಬೆಂಗಳೂರಿಗೆ ಅಕ್ಕಪಕ್ಕದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಮತ್ತು ಪಕ್ಕದ ತಮಿಳುನಾಡಿನಿಂದಲೂ ನಿತ್ಯ ತರಕಾರಿ ಪೂರೈಕೆ ಆಗುತ್ತದೆ. ಆದರೆ ಇತ್ತೀಚೆಗೆ ಚಂಡಮಾರುತದಿಂದಾಗಿ ತಮಿಳುನಾಡು ಮತ್ತು ರಾಜ್ಯದ ಹಲವೆಡೆ ಭಾರೀ ಮಳೆಯಾಗಿ ಅಸ್ತವ್ಯಸ್ತ ಉಂಟಾಗಿದೆ. ಮಳೆಯಿಂದ ತರಕಾರಿ ಬೆಳೆಗೆ ಹಾನಿಯಾಗಿದ್ದು, ಇಳುವರಿ ಕಡಿಮೆಯಾಗಿದೆ.
ಬೆಳ್ಳುಳ್ಳಿಗೆ ಫುಲ್ ಡಿಮ್ಯಾಂಡ್!
ಇನ್ನು ಅದೇ ರೀತಿಯಾಗಿ ಬೆಳ್ಳುಳ್ಳಿ ದರ ಅಂತೂ ಕೇಳಲೇಬೇಡಿ ಕೆಜಿಗೆ ಬೆಳ್ಳುಳ್ಳಿ 600 ಗಡಿ ದಾಟಿದೆ. ಎರಡು ನೂರು ರೂಪಾಯಿ ಕೆಜಿ ದಂತಹ ಬೆಳ್ಳುಳ್ಳಿ ಈಗ ದಿಢೀರನೆ ಏರಿಕೆ ಕಂಡಿದ್ದು, ಒಮ್ಮೆಲೆ 600 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಗ್ರಾಹಕರು ಬೆಳ್ಳುಳ್ಳಿ ತಗೊಳೋದಾ ಅಥವಾ ಬೇಡ್ವಾ ಅನ್ನೋ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ. ಇನ್ನು ಈರುಳ್ಳಿ ಸಹ ಕೆಜಿಗೆ 100 ರೂಪಾಯಿ ತಲುಪಿದ್ದು, ಇದೇ ರೀತಿ ಮುಂದುವರೆದರೆ ಅದು ಸಹ ಮತ್ತೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.