ಬೆಂಗಳೂರು: ಆರೋಗ್ಯ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವಂತ ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಪ್ರೋತ್ಸಾಹಧನ ರೂ.15,000 ಪಾವತಿಗೆ ನಿಯಮಾನುಸಾರ ಮಾರ್ಗಸೂಚಿಯಲ್ಲಿ ಅವಕಾಶವಿರುವುದಿಲ್ಲ ಎಂಬುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ. ಈ ಮೂಲಕ ಪ್ರತಿಭಟನೆಗೆ ಮುಂದಾಗಿರುವಂತ ಆಶಾ ಕಾರ್ಯಕರ್ತೆಯರಿಗೆ ಬಿಗ್ ಶಾಕ್ ನೀಡಿದೆ.
ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಮಾಹಿತಿ ನೀಡಿದ್ದು, ದಿನಾಂಕ 04-01-2025ರಂದು ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಅವರ ಅಧ್ಯಕ್ಷತೆಯಲ್ಲಿ ಸಿಐಯುಟಿಯುಸಿ ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಆಶಾ ಕಾರ್ಯಕರ್ತೆಯರಿಗೆ ಒದಗಿಸಲಾಗುತ್ತಿರುವ ಎಲ್ಲಾ ಸೌಲಭ್ಯದ ಬಗ್ಗೆ ಮನವರಿಕೆ ಮಾಡಿ ಕೊಡಲಾಗಿದೆ ಎಂದಿದ್ದಾರೆ.
ಆಶಾ ಕಾರ್ಯಕ್ರಮವು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಭಾಗವಾಗಿದೆ. ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿರುವುದರಿಂದ ನಿಯಮಾನುಸಾರ ಮಾರ್ಗಸೂಚಿಯಂತೆ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನಕ್ಕೆ ಒಳಪಟ್ಟಿರುತ್ತಾರೆ. ಎಐಯುಟಿಯುಸಿ ಸಂಘಟನೆಯ ಬೇಡಿಕೆಯಂತೆ ಇಲಾಖೆಯ ವತಿಯಿಂದ ಪ್ರತಿ ಮಾಹೆ ನಿರ್ದಿಷ್ಟ 15,000 ರೂಪಾಯಿಗಳನ್ನು ಪಾವತಿ ಮಾಡಲು ನಿಯಮಾನುಸಾರ ಮಾರ್ಗಸೂಚಿಯಂತೆ ಅವಕಾಶವಿರುವುದಿಲ್ಲ ಎಂಬುದಾಗಿ ಮನವರಿಕೆ ಮಾಡಿಕೊಡಲಾಗಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಬಹುತೇಕ ಚಟುವಟಿಕೆಗಳನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಮೇಲ್ವಿಚಾರಣೆ ಮಾಡಲು ಅನುವಾಗುವಂತೆ ಡಿಜಿಟಲೀಕರಣಗೊಳಿಸಲಾಗಿರುತ್ತದೆ. ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯ ಹಿನ್ನಲೆಯಲ್ಲಿ ಎಲ್ಲಾ ಮಾಹಿತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಕೇವಲ 2-3 ಚಟುವಟಿಕೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಶಾ ಕಾರ್ಯಕರ್ತೆಯರು ನಿರ್ವಹಿಸಬೇಕಾಗಿರುತ್ತದೆ. ಮೊಬೈಲ್ ಪೋನ್ ಬಳಕೆಗೆ ಪ್ರತ್ಯೇಕವಾಗಿ ಮಾಸಿಕ ರೂ.280 ಗಳನ್ನು ಪಾವತಿ ಮಾಡಲಾಗುತ್ತದೆ ಎಂಬ ಅಂಶವನ್ನು ತಿಳಿಯಪಡಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ