ಬೆಂಗಳೂರು : ರಸ್ತೆಗಳಲ್ಲಿ ವೀಲಿಂಗ್ ಮಾಡಿ ವಾಹನ ಚಲಾಯಿಸುವ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿ ವಾಹನ ಪರವಾನಿಗೆಯನ್ನು ಖಾಯಂ ಆಗಿ ರದ್ದುಗೊಳಿಸಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು.
ನಗರದಲ್ಲಿ ಮಕ್ಕಳು ರಸ್ತೆ ದಾಟುವಾಗ ಆಗುವ ಅಪಘಾತಗಳು ಹೆಚ್ಚಾಗಿದ್ದು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ರಸ್ತೆ ಅಪಘಾತ ಕುರಿತು ಜಾಗೃತಿ ಮೂಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಮಕ್ಕಳು ರಸ್ತೆ ದಾಟುವಾಗ ಶಾಲೆಯ ಆಯಾಗಳೊಂದಿಗೆ ದಾಟುವುದು,ಶಾಲಾ ವಾಹನಗಳನ್ನು ಓಡಿಸುವ ಚಾಲಕರನ್ನು ಕಡ್ಡಾಯ ತಪಾಸಣೆ ಹಾಗೂ ವಾಹನದಲ್ಲಿ ಸೀಮಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ಕೊಂಡೊಯ್ಯದಂತೆ ಶಾಲೆಗಳು ಮುಂಜಾಗ್ರತೆ ವಹಿಸಬೇಕೆಂದು ಹೇಳಿದರು.
ಅಪಘಾತ ನಿಯಂತ್ರಿಸಲು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಬ್ಲಾಕ್ ಸ್ಪಾಟ್ (Black spots) ಸೂಚನಾ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು.
ವಾರಂತ್ಯದಲ್ಲಿ ಹೆಬ್ಬಾಳ ಮೇಲ್ಸೇತುವೆ ಮತ್ತು ಕುಣಿಗಲ್ ರಸ್ತೆಗಳಲ್ಲಿ ಯುವಕರು ವೀಲಿಂಗ್ ಮಾಡುತ್ತಾ ಬೈಕ್ ಗಳನ್ನು ಚಲಾಯಿಸುತ್ತಿರುತ್ತಾರೆ ಇದರಿಂದ ಸಾರ್ವಜನಿಕರಿಗೆ ಸಂಚಾರಿಸಲು ತೊಂದರೆ ಆಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದಾಗ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿ ಆರ್ ಸಿ, ಲೈಸೆನ್ಸ್ ರದ್ದುಪಡಿಸುವಂತೆ ಸೂಚಿಸಿದರು.
ಅಪಘಾತ ಸಂಭವಿಸುವ ಸ್ಥಳಗಳಿಗೆ ತಕ್ಷಣದಲ್ಲಿ ಆಂಬುಲೆನ್ಸ್ ಸೇವೆ ಒದಗಿಸಲು ಜಿಪಿಎಸ್ ಮ್ಯಾಪಿಂಗ್ ಸ್ಥಳಗಳನ್ನು ಗುರುತಿಸಲು ಅಗತ್ಯ ರಸ್ತೆ ನಕ್ಷೆ ನೀಡಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮುಂದಿನ ಸಭೆಯಲ್ಲಿ ತಿಂಗಳಲ್ಲಿ ಸಂಭವಿಸುವ ಒಟ್ಟು ಅಪಘಾತ ನಿಯಂತ್ರಣಕ್ಕೆ ಕ್ರಿಯಾಯೋಜನೆ ಹಾಗೂ ಕೈಗೊಂಡಿರುವ ಕ್ರಮಗಳು ಬಗ್ಗೆ ಮಾಹಿತಿಯನ್ನು ಪಿಪಿಟಿಯಲ್ಲಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ವ್ಯವಸ್ಥಾಪಕರಾದ ಶ್ರೀನಿವಾಸ್ ಗೌಡ, ಬೆಂಗಳೂರು ನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಡಾ. ಜಗದೀಶ ಕೆ.ನಾಯಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಕಾಶ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿಭಾಗೀಯ ಸಾರಿಗೆ ಅಧಿಕಾರಿಯಾದ ಪ್ರತಿಮಾ, ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಸಾರಿಗೆ ಅಧಿಕಾರಿಯಾದ ಭಾಗ್ಯಲಕ್ಷ್ಮೀ ಎಂ, ಶಾಲಾ ಶಿಕ್ಷಣ ಇಲಾಖೆಯ ಉತ್ತರ ವಿಭಾಗದ ಉಪನಿರ್ದೇಶಕರಾದ ವಾಸು, ಶಾಲಾ ಶಿಕ್ಷಣ ಇಲಾಖೆಯ ದಕ್ಷಿಣ ವಿಭಾಗದ ಉಪನಿರ್ದೇಶಕರಾದ ಸಮೀರ್ ಪಾಷಾ, ಲೋಕೋಪಯೋಗಿ ಕಾರ್ಯಪಾಲಕ ರಾಜು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯಪಾಲಕ ಅಭಿಯಂತರರಾದ ಶ್ರೀಕಾಂತ್, ಬ್ಲೂಮ್ ಬರ್ಗ್ (Bloomberg) ಬಿ.ಇ.ಆರ್.ಜಿ ಸಂಸ್ಥೆಯ ಅಪರಾಜಿತ ರೈ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.