ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮನೆ ಬಾಡಿಗೆ ಗಗನಕ್ಕೆ ಏರುತ್ತಿದೆ. ಎರಡು ವರ್ಷಗಳಿಂದ ಕೊರೊನಾ ಕಾಲದಲ್ಲಿ ನಷ್ಟವನ್ನು ಕಂಡ ಮನೆ ಮಾಲೀಕರು ಏಕಾಏಕಿ ನಷ್ಟ ಸರಿದೂಗಿಸಲು ಮನೆ ಮಾಲೀಕರು “ಮನೆ ಬಾಡಿಗೆ ಏರಿಕೆ” ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗ ಬಹುತೇಕ ಉದ್ಯೋಗಿಗಳನ್ನು ಖಾಯಂ ಆಗಿ ನಿರುದ್ಯೋಗಿಗಳನ್ನಾಗಿ ಮಾಡಿದರೆ, ಮತ್ತೆ ಕೆಲವರಿಗೆ ಮನೆಯಿಂದ ಕೆಲಸ ಎಂಬ ಪರ್ಯಾಯ ಮಾರ್ಗವನ್ನು ನೀಡಿತು.ಬೇರೆ ಊರುಗಳಿಂದ ಬಂದು ಬೆಂಗಳೂರಿನಲ್ಲಿ ಚಿಕ್ಕ ಗೂಡಿನಲ್ಲಿ ವಾಸವಿದ್ದವರೂ ಕೂಡ ಊರು ಬಿಡುವಂತಾಯಿತು. ತಮ್ಮದೇ ಮನೆ ಎಂದುಕೊಂಡಿದ್ದ ಹಲವರು ಕೊರೊನಾ ಮುಗಿಸಿಕೊಂಡು ಬಂದು ಅದೇ ಮನೆಗಳಲ್ಲಿ ಇದ್ದಾರೆ. ಇವರಿಗೆಲ್ಲಾ ಮನೆ ಮಾಲೀಕರು ದೊಡ್ಡ ಆಘಾತ ನೀಡುತ್ತಿದ್ದಾರೆ.
ವರ್ಷಕ್ಕೆ ಶೇಕಡಾ ಐದರಷ್ಟು ಏರಿಸಬೇಕಿದ್ದ ಬಾಡಿಗೆ ಮೊತ್ತವನ್ನು ಬರೋಬ್ಬರಿ ಶೇ 35ರಷ್ಟು ಏರಿಸಲು ನಿರ್ಧರಿಸಿದ್ದು, ಇದು ಬಾಡಿಗೆದಾರರಿಗೆ ನುಂಗಲಾರದ ತುತ್ತಾಗಿದೆ. ಇಷ್ಟು ದಿನ 12,000 ಬಾಡಿಗೆ ಕಟ್ಟುತ್ತಿದ್ದ ಹಲವರು ಒಮ್ಮೆಲೇ ಮುಂದಿನ ತಿಂಗಳಿಂದ 16,000 ಕಟ್ಟುವಂತೆ ಮನೆ ಮಾಲೀಕರಿಂದ ಮೌಖಿಕ ನೋಟಿಸ್ ಪಡೆದಿದ್ದಾರೆ.
ನಗರದ ಹಲವೆಡೆ ಇನ್ನೂ ಮನೆ, ಅಂಗಡಿಗಳು ಖಾಲಿ ಇರುವುದನ್ನು ಪ್ರತಿದಿನ ನೋಡುತ್ತಿದ್ದೇವೆ. ಆದರೂ ಕೂಡ ಮನೆ ಮಾಲೀಕರು ಬಾಡಿಗೆ ಹೆಚ್ಚಿಸುವುದನ್ನು ಬಿಟ್ಟಿಲ್ಲ. ಬೆಂಗಳೂರು ಬಿಟ್ಟು ಹೋಗಿದ್ದ ಸಾವಿರಾರು ಮಂದಿ ಮತ್ತೆ ಉದ್ಯೋಗನಗರಿಗೆ ವಾಪಸ್ ಬಂದಿದ್ದು, ಬಾಡಿಗೆದಾರರು ದರ ಹೆಚ್ಚಿಸಿರುವುದಕ್ಕೆ ಮತ್ತೊಂದು ಕಾರಣವು ಹೌದು.
ಇಷ್ಟು ದಿನ ತಣ್ಣಗಿದ್ದ ಬಾಡಿಗೆ ರಿಯಲ್ ಎಸ್ಟೇಟ್, ಜನರು ಈಗ ತಮ್ಮ ಕೆಲಸದ ನಿಮಿತ್ತ ಮತ್ತೆ ನಗರಕ್ಕೆ ಮರಳಿರುವುದರಿಂದ ಎಂದಿನ ಬೇಡಿಕೆಗೆ ಒಗ್ಗಿಕೊಳ್ಳುತ್ತಿದೆ. ಮನೆ ಬಾಡಿಗೆ ಗಗನಕ್ಕೇರಿದ್ದು, ಬಾಡಿಗೆದಾರರು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದಾರೆ
ಯಲಹಂಕದಲ್ಲಿ ವಾಸವಿರುವ ಬಾಡಿಗೆದಾರರು ಒಂದು ವರ್ಷದಿಂದ 14,000 ಬಾಡಿಗೆ ಕಟ್ಟುತ್ತಿದ್ದರು. ಈಗ ಮುಂದಿನ ತಿಂಗಳಿಂದ 19,000 ಬಾಡಿಗೆ ಕಟ್ಟುವಂತೆ ಮನೆ ಮಾಲೀಕರು ಹೇಳಿದ್ದಾರೆ.
ಏಕಾಏಕಿ ಐದು ಸಾವಿರ ರೂಪಾಯಿಗಳ ಏರಿಕೆಯಿಂದ ಮನೆ ಖಾಲಿ ಮಾಡುವ ಸ್ಥಿತಿಗೆ ಬಾಡಿಗೆದಾರ ಬಂದಿದ್ದಾರೆ. ಶೇಕಡಾ ಐದರಷ್ಟರ ಬದಲಿಗೆ 10 ಏರಿಸಿ, ನೀಡುತ್ತೇನೆ ಎಂಬ ಅವರ ಮನವಿಗೂ ಮನೆ ಮಾಲೀಕರು ಸ್ಪಂದಿಸಿಲ್ಲ. ಏಕಾಏಕಿ ಮನೆ ಕಾಲಿ ಮಾಡುವುದು ಕೂಡ ಬಾಡಿಗೆದಾರರಿಗೆ ಕಷ್ಟ, ಮನೆ ಖಾಲಿ ಮಾಡದಿದ್ದರೇ ಒಮ್ಮೆಲ್ಲೇ ಐದಾರು ಸಾವಿರವನ್ನು ಕಳೆದುಕೊಳ್ಳಬೇಕು.
ಒಟ್ಟಾರೆ ಬಾಡಿಗೆದಾರರ ಸ್ಥಿತಿ ಕೇಳುವಂತಿಲ್ಲ. ಇನ್ನು, “ಸಾಂಕ್ರಾಮಿಕ ಸಮಯದಲ್ಲಿ ಮನೆ ಮಾಲೀಕರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಾಡಿಗೆ ಮೊತ್ತವನ್ನು ಕಡಿತಗೊಳಿಸಿದ್ದಾರೆ. ಹಲವು ಬಾಡಿಗೆ ಮನೆ, ಅಂಗಡಿಗಳು ತಿಂಗಳುಗಟ್ಟಲೇ ಖಾಲಿ ಬಿದ್ದಿದ್ದವು. ಈಗ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ, ಬಾಡಿಗೆ ಮನೆಗಳ ಬೆಲೆ ಏರುತ್ತಿದೆ. ಹೀಗಾಗಿ ಜನರು ಬಾಡಿಗೆಗೆ ಪಡೆದ ಆಸ್ತಿಯಿಂದ ಹೆಚ್ಚಿನ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ” ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಮಾಹಿತಿ ನೀಡಿದ್ದಾರೆ.