ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸಿ ಎಂದು ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದರು. ಹೈಕೋರ್ಟ್ ನಿರ್ದೇಶನ ಧಿಕ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸುಮಾರು 30 ಸಾವಿರ ಸಾರಿಗೆ ನೌಕರರಿಗೆ ಇದೀಗ ಸಂಕಷ್ಟ ಎದುರಾಗಿದೆ. ಕೆಲಸಕ್ಕೆ ಗೈರಾಗಿದ್ದ ಸಾರಿಗೆ ನೌಕರರ ಒಂದು ದಿನದ ವೇತನ ಕಡಿತದ ಜತೆಗೆ, ಗೈರಿಗೆ ಕಾರಣ ಕೇಳಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
ವೇತನ ಹೆಚ್ಚಳ ಹಿಂಬಾಕಿ ಮತ್ತು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೆಎಸ್ಸಾರ್ಟಿಸಿ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಮಂಗಳವಾರ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಸೋಮವಾರ ಹೈಕೋರ್ಟ್ ನೌಕರರಿಗೆ ಸೂಚಿಸಿತ್ತು. ಮಂಗಳವಾರ ಕೆಲಸಕ್ಕೆ ಗೈರಾಗಿದ್ದ ಸಾರಿಗೆ ನೌಕರರ ಒಂದು ದಿನದ ವೇತನ ಕಡಿತದ ಜತೆಗೆ, ಗೈರಿಗೆ ಕಾರಣ ಕೇಳಿ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
ಅದನ್ನು ನಿರ್ಲಕ್ಷಿಸಿದ್ದ ಜಂಟಿ ಕ್ರಿಯಾ ಸಮಿತಿ ನೀಡಿದ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ 1.14 ಲಕ್ಷ ನೌಕರರ ಪೈಕಿ 30 ಸಾವಿರಕ್ಕೂ ಹೆಚ್ಚಿನ ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಬೆಂಬಲ ನೀಡಿದ್ದರು. ಆ ಹಿನ್ನೆಲೆಯಲ್ಲಿ ಗೈರಾಗಿದ್ದ ಎಲ್ಲ ನೌಕರರಿಗೂ ನೋಟಿಸ್ ನೀಡಿ, ಕರ್ತವ್ಯಕ್ಕೆ ಹಾಜರಾಗದಿರಲು ಕಾರಣ ತಿಳಿಸುವಂತೆ ಸೂಚಿಸಲಾಗಿದೆ.