ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರು ಜನಸಾಮಾನ್ಯರಿಗೆ ಬಿಗ್ ಶಾಕ್ ಎದುರಾಗಿದ್ದು, ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆಯ ದರ ಏರಿಕೆಯಾಗಿದೆ.
ಹೌದು, ಕೆಲವು ದಿನಗಳ ಹಿಂದೆ 6 ರೂ.ಗೆ ಮಾರಾಟವಾಗುತ್ತಿದ್ದ ಒಂದು ಮೊಟ್ಟೆ ಈಗ 8 ರೂ.ಗೆ ಮಾರಾಟವಾಗುತ್ತಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಮೊಟ್ಟೆಗೆ ಹೆಚ್ಚು ಬೇಡಿಕೆ ಇರುತ್ತದೆ. ಇದರಿಂದ ಮಾರಾಟ ಹೆಚ್ಚಾಗುವ ಜೊತೆಗೆ ದರವೂ ಏರಿಕೆಯಾಗುತ್ತದೆ.
ವಿವಿಧ ಮಾಲ್ ಹಾಗೂ ಆನ್ಲೈನ್ ಖರೀದಿ ವೇದಿಕೆಗಳಲ್ಲಿ ಒಂದು ಮೊಟ್ಟೆ ದರ 6.95 ರೂ.ನಿಂದ 7.50 ರೂ. ಇದೆ. ನಗರದ ವಿವಿಧ ಪ್ರದೇಶಗಳ ಕಿರಾಣಿ ಅಂಗಡಿಗಳಲ್ಲಿ 7.50ರಿಂದ 8 ರೂ.ಗೆ ಮಾರಾಟವಾಗುತ್ತಿದೆ.
ಇನ್ನು ರಾಜ್ಯದಲ್ಲಿ ನಿತ್ಯ 2.20 ಕೋಟಿ ಮೊಟ್ಟೆ ಉತ್ಪಾದನೆ ಆಗುತ್ತದೆ. ಇದರಲ್ಲಿ ಗೋವಾ, ಮಹಾರಾಷ್ಟ್ರ, ಕೇರಳಕ್ಕೆ ಪೂರೈಸಲಾಗುತ್ತದೆ. ಇದೇ ರೀತಿ ದರ ಏರಿಕೆಯಾದರೆ ಚಿಲ್ಲರೆ ಮೊಟ್ಟೆ ದರ 10 ರೂ.ಗೆ ತಲುಪುವ ಸಾಧ್ಯತೆ ಇದೆ. ಮಂಗಳೂರು ಸೇರಿ ಹಲವು ಕಡೆ ಚಿಲ್ಲರೆ ಮೊಟ್ಟೆ ಕನಿಷ್ಠ ದರ 8 ರೂ.ಗೆ ಮಾರಾಟವಾಗುತ್ತಿದೆ. ಅನಿಯಂತ್ರಿತ ದರ ಏರಿಕೆ ಮೊಟ್ಟೆಯನ್ನು ಅವಲಂಬಿಸಿದ ವ್ಯಾಪಾರ, ಉತ್ಪನ್ನಕ್ಕೂ ಹೊಡೆತ ನೀಡಿದೆ.








