ಬೆಂಗಳೂರು : ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ದಿನೇ ದಿನೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಅಡುಗೆ ಎಣ್ಣೆ ಸೇರಿದಂತೆ ಇತರ ವಸ್ತುಗಳ ಬೆಲೆಯೂ ಹೆಚ್ಚಳವಾಗಿದೆ. ಇಷ್ಟು ಸಾಲದು ಎಂಬಂತೆ ಚಳಿಗಾಲ ಎಂಟ್ರಿಯಾಗುತ್ತಿದ್ದಂತೆ ಈಗ ಕೋಳಿ ಮೊಟ್ಟೆ ಬೆಲೆಯು ಗಗನಕ್ಕೇರಿದೆ.
ಅದರಲ್ಲೂ ಚಳಿಗಾಲ ಬಂದಾಗ ಸುತ್ತಮುತ್ತಲಿನ ಎಲ್ಲಾ ವಾತಾವರಣವೂ ಬದಲಾಗುತ್ತೆ. ಈ ಸಮಯದಲ್ಲಿ ನಾವು ಸೇವಿಸುವ ಆಹಾರ ಕೂಡ ಬದಲಾಗುತ್ತದೆ, ಬದಲಾಗಲೇ ಬೇಕು. ಯಾಕೆಂದರೆ ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗೆ ಇಡುವಂತಹ ಆಹಾರವನ್ನು ನಾವು ಸೇವಿಸುತ್ತೇವೆ. ಅದರಲ್ಲೂ ಚಳಿಗಾಗಲ್ಲಿ ಮಾಂಸಾಹಾರ ಸೇವಿಸುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಅದರಲ್ಲೂ ಬ್ಯಾಚುಲರ್ಸ್ ಫುಡ್ ಎಂದು ಕರೆಸಿಕೊಳ್ಳುವ ಮೊಟ್ಟೆಯ ದರ ಈಗ ಏರುಗತಿಯಲ್ಲಿದೆ. ಈ ಬಾರಿ ಪ್ರತಿ ಮೊಟ್ಟೆ 5 ರೂಪಾಯಿಯಿಂದ ಹಿಡಿದು 6-7 ರೂ. ತಲುಪಿದೆ. ಇದು ಈ ವರ್ಷದ ಗರಿಷ್ಠ ದರ ಎನ್ನುವುದು ಮೊಟ್ಟೆ ವ್ಯಾಪಾರಿಗಳು ಹಾಗೂ ಗ್ರಾಹಕರ ಅಭಿಮತ.
ಚಳಿಗಾಲದಲ್ಲೇ ಯಾಕೆ ಮೊಟ್ಟೆ ಬೆಲೆ ಏರಿಕೆ..?
ಚಳಿಗಾಲದಲ್ಲಿ ಮೊಟ್ಟೆ ಉತ್ಪಾದನೆ ಕಡಿಮೆಯಾಗುತ್ತದೆ. ಮೊಟ್ಟೆಗಳ ಬಳಕೆ ಹೆಚ್ಚಾಗುತ್ತದೆ. ಜತೆಗೆ ಡಿಸೆಂಬರ್ ತಿಂಗಳು ಹತ್ತಿರವಾಗುತ್ತಿದ್ದಂತೆ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಕೇಕ್ ತಯಾರಿಕೆಗೆ ಹೆಚ್ಚಾಗಿ ಮೊಟ್ಟೆ ಬಳಸಲಾಗುತ್ತದೆ . ಡಿಸೆಂಬರ್ ನಲ್ಲಿ ಸುಮಾರು 2.5 ಕೋಟಿ ಮೊಟ್ಟೆಗಳನ್ನು ಬಳಸಲಾಗುತ್ತಿದ್ದು, ಬೆಂಗಳೂರು, ನಂತರ ಮಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದ ಮೊಟ್ಟೆ ಬಳಕೆಯಾಗುತ್ತಿದೆ.
ಪ್ರತಿದಿನ ಸುಮಾರು 5 ಲಕ್ಷ ಮೊಟ್ಟೆ ಬಳಕೆಯಾಗುತ್ತಿದೆ ಎಂದು ಹೇಳಲಾಗಿದ್ದು, ಮೊಟ್ಟೆ ದರ ಏರಿಕೆಯಿಂದ ಗ್ರಾಹಕರು ದಂಗಾಗಿದ್ದಾರೆ. ಇನ್ನೂ ದೇಶ ವಿದೇಶ ಸಾಗಾಟ ಯತೇಥ್ಛವಾಗಿ ಮಾಡಲಾಗುತ್ತದೆ . ಮುಂದಿನ ದಿನಗಳಲ್ಲಿ ಒಂದು ಮೊಟ್ಟೆ ದರ 7 ರೂಪಾಯಿಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವರದಿ : ಅಕ್ಷತಾ ಸಚಿನ್