ಬೆಂಗಳೂರು : ರೇಬಿಸ್ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು ಬೆಂಗಳೂರಿನಲ್ಲಿ ರೇಬೀಸ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಕಳೆದ ಆರು ತಿಂಗಳಲ್ಲಿ 17 ಜನರು ರೇಬೀಸ್ನಿಂದ ಮೃತಪಟ್ಟಿದ್ದಾರೆ. ನಾಯಿ ಕಡಿತದ ಪ್ರಕರಣಗಳು ಕೂಡ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿದೆ. ರೇಬೀಸ್ನ ಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯ.
ಹೌದು ಬೆಂಗಳೂರಿನಲ್ಲಿ 17 ಜನರು ರೇಬಿಸ್ ರೋಗದಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 23 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 17 ರೇಬಿಸ್ ಪ್ರಕರಣಗಳು ಧೃಢಪಟ್ಟಿದ್ದರೇ, ಈ ವರ್ಷ 6 ತಿಂಗಳಲ್ಲೇ 17 ಜನರು ರೇಬಿಸ್ಗೆ ಬಲಿಯಾಗಿದ್ದು ಆತಂಕ ಹೆಚ್ಚಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ರೇಬಿಸ್ ಪ್ರಕರಣಗಳಲ್ಲಿ ಏರಿಕೆಯಾಗಿದೆ.
ನಾಯಿ ಕಡಿತ ಕೇಸ್ಗಳಲ್ಲಿ ತುಮಕೂರೇ ರಾಜ್ಯದಲ್ಲಿ ಮೊದಲಿಗಿದೆ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 10 ಸಾವಿರ ಜನರಿಗೆ ನಾಯಿಗಳು ಕಡಿದಿವೆ. ಇದರಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಇನ್ನು ಶಿರಾ ಒಂದರಲ್ಲೇ ನಾಯಿ ಕಡಿತಕ್ಕೆ 6 ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಹಿಡಿದ ನಾಯಿಗಳನ್ನು ತುಮಕೂರಿಗೆ ತಂದು ಬಿಡ್ತಿದ್ದಾರಂತೆ.
ರೇಬಿಸ್ ರೋಗದ ಲಕ್ಷಣಗಳು
ತೀವ್ರ ನೋವು, ಸುಸ್ತಾಗುವುದು ತಲೆನೋವು, ತೀವ್ರ ಜ್ವರ, ಸ್ನಾಯುಗಳ ಬಿಗಿತ ಮತ್ತು ನೋವು, ಪಾರ್ಶ್ವವಾಯು, ಲಾಲಾರಸ ಅಥವಾ ಕಣ್ಣೀರು ಹೆಚ್ಚು ಉತ್ಪತ್ತಿಯಾಗಲು ಪ್ರಾರಂಭಿಸುವುದು. ದೊಡ್ಡ ಶಬ್ದಗಳಿಂದ ಕಿರಿಕಿರಿ ಹಾಗೂ ಮಾತನಾಡಲು ತೊಂದರೆಯಾಗುವುದು ಇಂತಹ ಲಕ್ಷಣ ಕಂಡು ಬಂದರೇ ನಿರ್ಲಕ್ಷ್ಯ ಮಾಡದೆ ಕೂಡಲೆ ಚಿಕಿತ್ಸೆ ಪಡೆಯಿರಿ ಎಂದು ವೈದ್ಯರು ಸೂಚಿಸಿದ್ದರು.