ಮಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಶಿವಾನಂದ್ ಪಾಟೀಲ್ ಅವರಿಗೆ ಅಪ್ಪನಿಗೆ ಹುಟ್ಟಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಸವನ ಬಾಗೇವಾಡಿಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿ ನಾನು ರಾಜೀನಾಮೆ ಕೊಟ್ಟು ಸ್ಪರ್ಧಿಸುತ್ತೇನೆ ಎಂದು ಸವಾಲು ಹಾಕಿದ್ದರು. ಈ ಸವಾಲು ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ್ ಇಂದು ಸ್ಪೀಕರ್ ಯುಟಿ ಖಾದರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಶಾಸಕ ಯತ್ನಾಳ್ ಅವರ ರಾಜೀನಾಮೆ ಅಂಗೀಕಾರವಾದ ಬಳಿಕ ನನ್ನ ರಾಜೀನಾಮೆ ಅಂಗೀಕರಿಸಿ ಎಂದು ಕಂಡೀಷನ್ ಹಾಕಿದ್ದಾರೆ. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಂಡಿಷನ್ ಹಾಕಿ ರಾಜೀನಾಮೆ ಕೊಡುವವರು ಮಾನ ಮರ್ಯಾದೆ ಇಲ್ಲದವರು ಎಂದು ಮತ್ತೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಾನಂದ್ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರವಾಗಿ ನಾನು ಕೊಟ್ಟಿರುವ ಹೇಳಿಕೆಯೇ ಬೇರೆ ಇದೆ. ಅವರು ಇಂದು ಹಾಕಿರುವ ಸವಾಲು ಬೇರೆ ಇದೆ. ರಾಜೀನಾಮೆ ಕೊಡುವವರು ಕಂಡೀಷನ್ ಹಾಕಲ್ಲ ಎಂದು ಉಚ್ಚಾಟಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು.
ಈ ಬಗ್ಗೆ ಶುಕ್ರವಾರದವರೆಗೆ ಹೇಳುತ್ತೇನೆ. ಶುಕ್ರವಾರದವರೆಗೆ ರಾಜೀನಾಮೆ ಸ್ವೀಕಾರವಾಗಿ ಗೆಜೆಟ್ ನೋಟಿಫಿಕೇಶನ್ ಆಗಿರಬೇಕು. ನಾನು ರಾಜೀನಾಮೆ ಕೊಟ್ಟ ನಂತರ ರಾಜೀನಾಮೆ ಅಂಗೀಕಾರ ಸ್ವೀಕಾರ ಮಾಡಿ ಎಂದು ಹೇಳುವುದು ಮೂರ್ಖತನ. ನಾಚಿಕೆ ಆಗಬೇಕು ಅವರಿಗೆ ಮಾನವ ಮರ್ಯಾದೆ ಇದ್ದವರು ಈ ಥರ ಯಾರು ಕಂಡಿಷನ್ ಹಾಕಿ ಪತ್ರ ಬರೆಯಲ್ಲ.
ಕೇವಲ ಎರಡೇ ಲೈನಿನಲ್ಲಿ ರಾಜೀನಾಮೆ ಪತ್ರ ಬರೆಯಬೇಕು. ಬೇಕಾಬಿಟ್ಟಿ ಕಂಡೀಷನ್ ಹಾಕಿ ಮುಂದಿನ ವಿಧಾನಸಭೆಯವರೆಗೆ ಅವರು ರಾಜೀನಾಮೆ ಕೊಡದೆ ಇದ್ದರೆ ಎಂದು ರಾಜಿನಾಮೆ ಸ್ವೀಕಾರ ಮಾಡಬೇಡಿ ಎಂದು ಹೇಳಿದರೆ ಮೂರ್ಖರು ಅಯೋಗ್ಯರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದರು.