ಯಾದಗಿರಿ : ಯಾದಗಿರಿಯಲ್ಲಿ ಘೋರವಾದ ದುರಂತ ನಡೆದಿದ್ದು, ಕೌಟುಂಬಿಕ ಕಲಹದಿಂದ ನೊಂದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಂಠಿ ತಾಂಡದಲ್ಲಿ ನಡೆದಿದೆ.
ಮೃತರನ್ನು ನೀಲಾಬಾಯಿ ಶಂಕರ್ (35) ಪುತ್ರಿಯರಾದ ರಾಜೇಶ್ವರಿ (10) ನಿಶಾ (4) ಎಂದು ತಿಳಿದುಬಂದಿದೆ.ನೀಲಾಬಾಯಿಗೆ ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿ ಒಟ್ಟು ಐದು ಜನ ಮಕ್ಕಳಿದ್ದು, ಬೇಬಿ (12) ಹಾಗೂ 11 ತಿಂಗಳ ಗಂಡು ಮಗು ಶೆವಾನನ್ನು ಮನೆಯಲ್ಲಿ ಬಿಟ್ಟು, ಇನ್ನುಳಿದ ಮೂವರು ಹೆಣ್ಣು ಮಕ್ಕಳನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ತಾಂಡಾದ ಬಳಿ ಇರುವ ಬಾವಿಗೆ ತೆರಳಿದ್ದಾರೆ.
ಮೊದಲು ಇಬ್ಬರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿದ್ದಾಳೆ. ಇನ್ನೊಬ್ಬ ಮಗಳು ಸಂಜುಳನ್ನು ಬಾವಿಗೆ ತಳ್ಳುವಾಗ ಬಾಲಕಿ ತಪ್ಪಿಸಿಕೊಂಡು ಓಡಿ ಹೋಗಿ ತಾಂಡಾದಲ್ಲಿ ಈ ವಿಷಯ ತಿಳಿಸಿದ್ದಾಳೆ. ಆದರೆ ಅಲ್ಲಿನ ನಿವಾಸಿಗಳು ಬಾವಿಯ ಹತ್ತಿರ ಬರುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.