ದಾವಣಗೆರೆ : ಬೀದರ್ ನಲ್ಲಿ ರೈಲಿಗೆ ತಲೆ ಕೊಟ್ಟು ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಕಲಬುರ್ಗಿಯಲ್ಲಿ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಅಲ್ಲದೆ ರಾಜೀನಾಮೆ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಕಾಮಗಾರಿಯಾದರೂ ಕೂಡ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಥಮ ದರ್ಜೆಯ ಗುತ್ತಿಗೆದಾರರು ಒಬ್ಬರು ಸಿಎಂ ಸಿದ್ದರಾಮಯ್ಯ ಹಾಗೂ ಗವರ್ನರ್ ಅವರಿಗೆ ದಯಾಮರಣ ಕೋರಿ ಪತ್ರ ಪಡೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೌದು ಕಾಮಗಾರಿ ಮುಗಿದು ಒಂದು ವರ್ಷ ಪೂರೈಸಿದರೂ ಕೂಡ ಇನ್ನು ಕಾಮಗಾರಿಯ ಹಣ ಬಿಡುಗಡೆಯಾಗಿಲ್ಲ. ಅಲ್ಲದೇ ಮಗಳ ಮದುವೆಗೆ ಹಣ ಇಲ್ಲ ಎಂದು ಮನನೊಂದ ಗುತ್ತಿಗೆದಾರ ಒಬ್ಬರು ಸಿಎಂ ಸಿದ್ದರಾಮಯ್ಯ, ಗವರ್ನರ್ ಗೆ ದಯಾಮರಣ ಕೋರಿ ಪತ್ರ ಬರೆದಿರುವ ಘಟನೆ ದಾವಣಗೆರೆ ಹರಿಹರದಲ್ಲಿ ನಡೆದಿದೆ.ಹರಿಹರದ ನಿವಾಸಿ ಪ್ರಥಮ ದರ್ಜೆಯ ಗುತ್ತಿಗೆದಾರ ಮೊಹಮ್ಮದ್ ಮಝರ್ ಪತ್ರ ಬರೆದ ಗುತ್ತಿಗೆದಾರ ಎಂದು ತಿಳಿದುಬಂದಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 2022-23ನೇ ಸಾಲಿನಲ್ಲಿ ಟೆಂಡರ್ ಕರೆದಿದ್ದರು.ಹರಿಹರ ನಗರಸಭೆ ಹಾಗು ಜಿಲ್ಲಾಧಿಕಾರಿ ಅವರು ಕಾಮಗಾರಿ ಕಾರ್ಯದೇಶ ನೀಡಿದ್ದರು. ಅನುಮೋದನೆ ಆದ ಬಳಿಕ ಟೆಂಡರ್ ನನಗೆ ಸಿಕ್ಕಿತು. ಈ ಒಂದು ಟೆಂಡರ್ ನಲ್ಲಿ ಭಾಗಿಯಾಗಿ ನಾನು ಸಾಲ ಸೋಲ ಮಾಡಿ, ಹರಿಹರ ನಗರಸಭೆ ವ್ಯಾಪ್ತಿಯ 29ನೇ ವಾರ್ಡ್ನ ಖಬರಸ್ಥಾನದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದೇನೆ. 21ನೇ ವಾರ್ಡ್ನಲ್ಲಿ 5 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಾಣ ಮಾಡಿದ್ದೇನೆ.
ಎಲ್ಲಾ ಕಾಮಗಾರಿಯೂ ಮುಗಿದಿದೆ ಆದರೆ ನನಗೆ ಇದುವರೆಗೂ ಒಟ್ಟು 25 ಲಕ್ಷ ಹಣ ಬರಬೇಕಿದೆ. ನನ್ನ ಹಣ ಕೇಳಿದರೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಮನೆಯಲ್ಲಿ ಮಗಳ ಮದುವೆ ಇದ್ದು, ಮದುವೆಗೆ ದಿನಾಂಕ ನಿಗದಿ ಮಾಡಬೇಕಾಗಿದೆ. ಆದ್ದರಿಂದ ಕಾಮಗಾರಿಯ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.