ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ದರ್ಶನ್ ರಾಜಾತಿಥ್ಯ ಪಡೆದುಕೊಂಡ ನಂತರ ಕೋರ್ಟಿನ ಆದೇಶದ ಮೇರೆಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದರು. ಇದೀಗ ಜೈಲಿನಲ್ಲಿ ತಮ್ಮ ವಿರುದ್ಧ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ ತಿಳಿದುಕೊಳ್ಳಲು ಟಿವಿ ಬೇಕೇ ಬೇಕು ಎಂದು ಜೈಲಿನ ಸಿಬ್ಬಂದಿ ಬಳಿ ದರ್ಶನ್ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಈ ಹಿಂದೆ ಆರೋಪಿ ದರ್ಶನ್ ಟಿವಿ ಸಹವಾಸವೇ ಬೇಡ, ಹಾಗೂ ಮಾಧ್ಯಮಗಳ ಕುರಿತು ಅತ್ಯಂತ ತುಚ್ಚವಾಗಿ ಮಾತನಾಡಿದ್ದರು. ಆದರೆ ಇದೀಗ ದರ್ಶನ್ ಗೆ ಟೀವಿ ಬೇಕಾಗಿದೆ. ಈ ವಿಚಾರವಾಗಿ ಜೈಲು ಸಿಬ್ಬಂದಿ ಬಳಿ ಆರೋಪಿ ದರ್ಶನ್ ಮಾಹಿತಿ ಕೇಳುತ್ತಿದ್ದ. ಪ್ರಕರಣದ ಕುರಿತು ಚಾರ್ಜ್ ಶೀಟ್ ಸಲ್ಲಿಕೆ ವಿಚಾರದ ಬಗ್ಗೆ ಜೈಲು ಸಿಬ್ಬಂದಿ ಬಳಿ ನಟ ದರ್ಶನ ಕೇಳಿದ್ದ ಎನ್ನಲಾಗುತ್ತಿದೆ. ಈ ವೇಳೆ ಸಿಬ್ಬಂದಿ ನಿಮಗೆ ಟಿವಿ ಬೇಕಾಗಿದ್ದರೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಂದು ಕೂಡ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪರಪ್ಪನ ಆಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ ಇದೀಗ ಮಂಕಾಗಿ ಕಂಡು ಬಂದಿದ್ದಾರೆ. ಜೈಲಿನ ಸಿಬ್ಬಂದಿ ಬಳಿ ಅಲ್ಲದೆ ಹೊರಗಿನ ಮಾಹಿತಿಯನ್ನು ನಟ ದರ್ಶನ್ ಕೇಳುತ್ತಿದ್ದಾರೆ. ಊಟ ಕೊಡಲು ಹೋದ ಸಿಬ್ಬಂದಿಯ ಬಳಿ ದರ್ಶನ್ ಹೊರಗಿನ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ.ಅಲ್ಲದೆ ಜೈಲಿನ ಬಳಿ ಜೈಲು ಸಿಬ್ಬಂದಿ ಮೂಲಕ ಸಂದೇಶ ಹೇಳಿರುವ ಆರೋಪಿ ದರ್ಶನ್, ಜೈಲಿನ ಬಳಿ ಯಾರು ಅಭಿಮಾನಿಗಳು ಬರುವುದು ಬೇಡ ಎಂದಿದ್ದಾರೆ.