ಹುಬ್ಬಳ್ಳಿ : ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡ ವ್ಯಕ್ತಿಯಿಂದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಕರೆ ಮತ್ತು 5 ಕೋಟಿ ರೂಪಾಯಿ ನೀಡುವಂತೆ ಒತ್ತಡ ಬಂದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇದೀಗ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿರುವ ಆರೋಪಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ಇದ್ದಾನೆ ಎಂಬ ಮಾಹಿತಿ ಮೊಬೈಲ್ ಪೊಲೀಸರಿಗೆ ದೊರಕಿದೆ.
ಹೌದು ಕರ್ನಾಟಕದ ಹುಬ್ಬಳ್ಳಿಯಲ್ಲಿ ಶಂಕಿತ ಆರೋಪಿಯ ಜಾಡು ಪತ್ತೆಯಾಗಿದೆ. ತಕ್ಷಣಕ್ಕೆ ಆತನನ್ನು ಬಂಧಿಸಿಲ್ಲವಾದರೂ, ಪೊಲೀಸ್ ತಂಡ ಹುಬ್ಬಳ್ಳಿಗೆ ತಲುಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕಟಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ವ್ಯಕ್ತಿಯೋರ್ವ ಸಲ್ಮಾನ್ಗೆ ಬೆದರಿಕೆ ಹಾಕಿದ್ದ. ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸ್ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಲಾಗಿತ್ತು.
1998ರ ಕೃಷ್ಣಮೃಗ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಬೇಕು ಎಂಬ ವಾಟ್ಸಪ್ ಸಂದೇಶ ಸಲ್ಮಾನ್ ಖಾನ್ ಅವರಿಗೆ ಬಂದಿತ್ತು. ವರ್ಲಿಯಲ್ಲಿರುವ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕಚೇರಿಯ ವಾಟ್ಸಪ್ ಸಹಾಯವಾಣಿಗೆ ಸೋಮವಾರ ಮಧ್ಯರಾತ್ರಿ ಈ ಸಂದೇಶ ಬಂದಿತ್ತು. ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡಿದ್ದ.
ಸಲ್ಮಾನ್ ಖಾನ್ ಜೀವಂತವಾಗಿ ಇರಲು ಬಯಸುವುದಾದರೆ, ಬಿಷ್ಣೋಯಿ ಸಮುದಾಯ ದೇವಾಲಯಕ್ಕೆ ತೆರಳಿ ಕ್ಷಮೆ ಯಾಚಿಸಬೇಕು ಇಲ್ಲವೇ ಐದು ಕೋಟಿ ರೂಪಾಯಿಗಳನ್ನು ಪಾವತಿಸಬೇಕು. ಅವರು ಹಾಗೆ ಮಾಡದಿದ್ದಲ್ಲಿ, ನಾವು ಅವರನ್ನು ಹತ್ಯೆ ಮಾಡುತ್ತೇವೆ. ನಮ್ಮ ಗ್ಯಾಂಗ್ ಇನ್ನೂ ಜೀವಂತವಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು.