ಬೆಳಗಾವಿ : ಕನ್ನಡ ಮಾತಾಡು ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ನಮ್ಮ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್ ಕೊಟ್ಟಿದ್ದಾರೆ. ಅವತ್ತು ಬಸ್ನಲ್ಲಿ ಒಬ್ಬರು – ಇಬ್ಬರು ಇರಲಿಲ್ಲ. 90 ಜನ ಪ್ರಯಾಣಿಸುತ್ತಿದ್ದರು. ನೋಡೋಣ ಆ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಬಿಮ್ಸ್ ಆಸ್ಪತ್ರೆ ಬಳಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದು, ಕಂಡಕ್ಟರ್ ಆರೋಗ್ಯ ಸ್ಥಿತಿ ಚೆನ್ನಾಗಿದ್ದು, ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಅವರ ವಿರುದ್ಧ ಪೋಕ್ಸೋ ದೂರು ದಾಖಲಾಗಿದ್ದಕ್ಕೆ ಅವರು ಆತಂಕಗೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಕೇಸ್ ಕೊಟ್ಟಿದ್ದಾರೆ ನಾನು ಪ್ರಕರಣದ ಬಗ್ಗೆ ಗೃಹ ಸಚಿವರ ಜೊತೆಗೆ ಮಾತನಾಡುತ್ತೇನೆ. ಕಂಡಕ್ಟರ್ ಮಹದೇವಪ್ಪ ಜೊತೆಗೆ ಸರ್ಕಾರ ಹಾಗೂ ರಾಜ್ಯದ ಜನ ಇದ್ದಾರೆ MES ಗುಂಡಾಗಿರಿಗೆ ಬೆಂಬಲ ನೀಡಿದರೆ ಕೇಸ್ ದಾಖಲಿಸುತ್ತೇವೆ ಎಂದು ತಿಳಿಸಿದರು.
ಅವತ್ತು ಇಬ್ಬರು ಹುಡುಗ – ಹುಡುಗಿ ಬಸ್ನಲ್ಲಿ ಹತ್ತಿದ್ದರು. ಇಬ್ಬರೂ ಅಪ್ರಾಪ್ತರು. ಹುಡುಗ ಕೂಡ ಜಿರೋ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಿದ್ದಾರೆ. ಆಗ ಕಂಡಕ್ಟರ್ ಕನ್ನಡದಲ್ಲಿ ಕೇಳಿದ್ದಾರೆ. ಅವರು ಮರಾಠಿಯಲ್ಲಿ ಮಾತನಾಡಿದ್ದಾರೆ. ಕಂಡಕ್ಟರ್ಗೆ ಮರಾಠಿ ಬರುವುದಿಲ್ಲ. ಅವರಿಗೆ ಕನ್ನಡ ಬರುವುದಿಲ್ಲವಂತೆ. ಹೀಗೆ ಮಾತಿಗೆ ಮಾತು ಬೆಳೆದಿದೆ. ಫೋನ್ ಮಾಡಿ ಮುಂದಿನ ನಿಲ್ದಾಣದಲ್ಲಿ ಅವರ ಕಡೆಯವರನ್ನು ಕರೆಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ.
ಬಾಳೇಕುಂದ್ರಿ ಬಳಿ ಮಧ್ಯಾಹ್ನ 1 ಗಂಟೆಗೆ ಘಟನೆ ನಡೆದಿದೆ. ಆಮೇಲೆ ನಮ್ಮ ಇಲಾಖೆಯವರು ದೂರು ಕೊಟ್ಟ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಅವರನ್ನು ಒಪ್ಪಿಸಿದ್ದಾರೆ. ಮಾರನೇ ದಿನ ಕಂಡಕ್ಟರ್ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್ ಕೊಟ್ಟಿದ್ದಾರೆ ಎಂದರು.