ಬಾಗಲಕೋಟೆ : ಸದ್ಯ ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದ್ದಿದ್ದು, ಈ ಕುರಿತು ಈಗಾಗಲೇ ಸಿಎಂ ಸಿದ್ದರಾಮಯ್ಯ ವಕ್ಫ್ ಮಂಡಳಿಯ ಸಭೆ ನಡೆಸಿ ಅಧಿಕಾರಿಗಳಿಗೆ ರೈತರಿಗೆ ನೀಡಿದ್ದ ನೋಟಿಸ್ ಗಳನ್ನು ಕೂಡಲೇ ಹಿಂಪಡೆಯಿರಿ ಎಂದು ಆದೇಶ ನೀಡಿದ್ದಾರೆ. ಆದರೂ ಸಹ ಬಿಜೆಪಿ ನಾಯಕರು ಪ್ರತಿಭಟನೆ ಹೋರಾಟ ಮಾಡುತ್ತಲೇ ಇದ್ದಾರೆ.
ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಅಹೋರಾತ್ರಿ ಪ್ರತಿಭಟನೆ ಮಾಡಿ ಮತ್ತಷ್ಟು ಕಿಚ್ಚು ಹೊತ್ತಿಸಿದರು. ಆದರೆ ಇದೀಗ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಇಂದು ಅಲ್ಲಮ ಪ್ರಭು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲೂ ಕೂಡ ಅವರು ವಕ್ಫ್ ವಿಚಾರ ಕುರಿತು ಮಾತನಾಡಿದಾಗ ಭಕ್ತರು ಹಾಗೂ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು.
ಹೌದು ತೇರದಾಳ ಪಟ್ಟಣದಲ್ಲಿ ಅಲ್ಲಮಪ್ರಭು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲೂ ಪ್ರಸ್ತಾಪಿಸಿದ್ದಾರೆ. ಆದ್ರೆ, ಸ್ಥಳೀಯರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ಲಿ ರಾಜಕೀಯ ಮಾಡಬೇಡಿ. ಇದು ಯಾವ ಕಾರ್ಯಕ್ರಮ ನೀವು ಏನು ಮಾತಾಡ್ತೀರಿ? ದೇವಸ್ಥಾನ ನಿರ್ಮಾಣಕ್ಕೆ ಎಲ್ಲಾ ಸಮುದಾಯ ದೇಣಿಗೆ ಕೊಟ್ಟಿದೆ. ಮುಸ್ಲಿಮರು 6 ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆಂದು ಎಂದು ತರಾಟೆಗೆ ತೆಗೆದುಕೊಂಡರು.ಬಳಿಕ ಯತ್ನಾಳ್ ಭಾಷಣ ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದು ಹೋದರು.