ಬೆಂಗಳೂರು : ಫೆ.17 ರಂದು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರದಲ್ಲಿ ‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ ಎಂಬ ಘೋಷವಾಕ್ಯ ಹೆಸರಿಸಿ ಅನಾವರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ನಿನ್ನೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಸವಣ್ಣ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಫೆಬ್ರವರಿ 17ರಂದು ವಿಶ್ವ ಗುರು ಬಸವಣ್ಣ -ಸಾಂಸ್ಕೃತಿಕ ನಾಯಕ’ ಎಂದು ನಮೂದಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮನುಷ್ಯ ಮನುಷ್ಯನನ್ನು ಪ್ರೀತಿಸಿದರೆ ಸದ್ಗುಣ. ಮನುಷ್ಯ ಮನುಷ್ಯರನ್ನು ದ್ವೇಷಿಸಿದರೆ ದುರ್ಗುಣ.ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮರೆಯಲು ಆಗುವುದಿಲ್ಲ. ಈ 4 ಜನರ ಹೆಸರನ್ನು ದೇಶ ಮರೆಯುವುದಕ್ಕೆ ಆಗುವುದಿಲ್ಲ. ಇವರೆಲ್ಲ ಸಮಾಜದಲ್ಲಿರುವ ಅಂಕು ಡೊಂಕು ತಿದ್ದಿದವರು. ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಅನುಭವ ಮಂಟಪದ ಮೂಲಕ ಸಂಸದೀಯ ವ್ಯವಸ್ಥೆ ತಂದಿದ್ದಾರೆ.ನಾವೀಗ ಸಂಸತ್ತು ಅಂತ ಯಾವುದನ್ನು ಹೇಳುತ್ತೇವೆಯೋ, ಆಗಲೇ ಜನರ ಧ್ವನಿ ಎತ್ತಲು ಬಸವಣ್ಣ ಅನುಭವ ಮಂಟಪವನ್ನು ಮಾಡಿದ್ದರು. ಮಹಿಳೆಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಮನವಾದಿಗಳು ಕೆಲವು ಕೆಟ್ಟ ಸಂಪ್ರದಾಯಗಳನ್ನ ಮಾಡಿಬಿಟ್ಟಿದ್ದರು. ಇದರಿಂದ ಅಸಮಾನತೆ ಹುಟ್ಟು ಹಾಕಿದ್ದರು. 850 ವರ್ಷಗಳ ಹಿಂದೆಯೇ ಬಸವಣ್ಣವರು ಕಂದಚಾರವನ್ನು ಹೊಗಲಾಡಿಸಲು ಶ್ರಮಿಸಿದ್ದರು ಎಂದು ಅವರು ಹೇಳಿದರು.
ನಾನೇನು ಕುರುಬ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿದ್ದೆನಾ? ನಾನು ಹುಟ್ಟಿದ್ದೇನೆ, ಜಾತಿ ವ್ಯವಸ್ಥೆ ಇದೆ. ಕರ್ಮ ಅನ್ನೋದು ಇದು ಪಟ್ಟಭದ್ರ ಹಿತಾಸಕ್ತಿಗಳು ಮಾಡಿದ್ದು. ಬಸವಣ್ಣನವರ ಕಾರ್ಯಕ್ರಮಕ್ಕೆ ಸರ್ಕಾರದಲ್ಲಿ ದುಡ್ಡು ಇಲ್ಲ ಎಂಬುದಾಗಿ ಹೇಳುವುದಿಲ್ಲ ಎಂದು ಸಿಎಂ ಹೇಳಿದರು.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ವನ್ನು ಅಳವಡಿಸಬೇಕು ಎಂದು ಈ ಹಿಂದೆ ಆದೇಶ ಹೊರಡಿ ಸಲಾಗಿತ್ತು. ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟ ಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದರಿಂದ ಫೆ.17 ರಂದು ಸರ್ಕಾರಿ ಕಚೇರಿಗಳ ಬಸವಣ್ಣನವರ ಭಾವಚಿ ತ್ರಗಳಲ್ಲಿ ‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ ಎಂಬ ವಾಕ್ಯ ರಾರಾಜಿಸಲಿದೆ ಎಂದು ವಿವರಿಸಿದರು.
ಬಸವಣ್ಣನವರು ನುಡಿದಂತೆ ನಡೆದರು. ವರ್ಗರಹಿತ, ಜಾತಿರಹಿತ, ಮೌಡ್ಯಗಳಿಲ್ಲದ ವೈಚಾರಿಕ ಸಮಾಜ ಸ್ಥಾಪನೆಯ ಆಶಯದಿಂದ ಕನ್ನಡದಲ್ಲೇ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ವಚನಗಳನ್ನು ರಚಿಸಿ ಜಾಗೃತಿ ಮೂಡಿಸಿದರು. ಕಾಯಕ, ದಾಸೋಹವನ್ನು ಬೋಧಿಸಿದ ಬಸವಣ್ಣನವರು ಯಾರೂ ಕುಳಿತು ತಿನ್ನದೇ ಕಾಯಕದಲ್ಲಿ ತೊಡಗಬೇಕೆಂದು ಪ್ರತಿಪಾದಿಸಿದರು. ಎಲ್ಲರಿಗೂ ಸಮಪಾಲು, ಸಮಬಾಳು ಎಂದು ಬಸವಾದಿ ಶರಣರು, ಅಂಬೇಡ್ಕರ್ ಹೇಳಿದ್ದರು ಎಂದು ತಿಳಿಸಿದರು.