ವಿಜಯಪುರ : ವಿಜಯಪುರದಲ್ಲಿ ಅಡ್ವಾನ್ಸ್ ಹಣ ಪಡೆದು ಕೆಲಸಕ್ಕೆ ತಡವಾಗಿ ಬಂದಿದ್ದಕ್ಕೆ ಕಾರ್ಮಿಕರ ಮೇಲೆ ಇಟ್ಟಂಗಿಯ ಭಟ್ಟಿಯ ಮಾಲೀಕನೊಬ್ಬ ಮರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಅಮಾನವೀಯ ಘಟನೆಯಾಗಿದ್ದು, ಈ ಒಂದು ಘಟನೆಯಲ್ಲಿ ತಪ್ಪಿತಸ್ಥ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಹಲ್ಲೆ ಮಾಡಿದಂತಹ ವ್ಯಕ್ತಿಗಳನ್ನು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೆ ವೇಳೆ ತಿಳಿಸಿದರು.
ಇನ್ನು ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಸಚಿವ ಎಂಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿ, ಮೂವರು ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ಈ ಕುರಿತು ಎಸ್ಪಿ ಜೊತೆ ಮಾತಾಡಿ ಮಾಹಿತಿ ಪಡೆದಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ಅಲ್ಲಿದ್ದವರೇ ಸಂಧಾನಕ್ಕೆ ಮುಂದಾಗಿದ್ದರು ಆದರೆ ಪೊಲೀಸರು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಎಂ ಪಾಟೀಲ್ ತಿಳಿಸಿದರು.