ವಿಜಯಪುರ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಿಂದಾಗಿ ಲಕ್ಷಾಂತರ ಬಡವರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದಾಗಿ ಮಹಿಳೆಯೊಬ್ಬರು ಊರಿಗೆ ಹೋಳಿಗೆ ಊಟ ಬಡಿಸುವ ಮೂಲಕ ರಾಜ್ಯದ ಗಮನಸೆಳೆದಿದ್ದರು. ಇದೀಗ ವಿಜಯಪುರದಲ್ಲಿ ಗೃಹಲಕ್ಷ್ಮಿ ಹಣದಿಂದ ಗ್ರಾಮದ ದೇವತೆಗೆ ನವರಾತ್ರಿಯ ನಿಮಿತ್ಯ ದೇವಿ ಮೂರ್ತಿಗೆ ಬೆಳ್ಳಿ ಕಿರೀಟ ಮಾಡಿಸಿದ್ದಾರೆ.
ಹೌದು ಈ ಒಂದು ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಹೂವಿನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಹೂವಿನಹಳ್ಳಿ ಗ್ರಾಮದ ಭಾಗಮ್ಮ ಗುರುಶಾಂತಗೌಡ ಬಿರಾದಾರ ದಂಪತಿ ತಮಗೆ ಬಂದ 12 ತಿಂಗಳ ಗೃಹಲಕ್ಷ್ಮಿ ಹಣದಿಂದ ನವರಾತ್ರಿ ನಿಮಿತ್ತ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ದೇವಿ ಮೂರ್ತಿಗೆ 250 ಗ್ರಾಂ ತೂಕದ ಬೆಳ್ಳಿ ಕಿರೀಟ ಮಾಡಿಸಿದ್ದಾರೆ.
ವಿಷಯ ತಿಳಿದು ಶಾಸಕ ಅಶೋಕ್ ಮನಗೂಳಿ ದಂಪತಿಗಳಿಬ್ಬರನ್ನು ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಪಾಲಿಸಿದೆ. ಪಂಚ ಗ್ಯಾರಂಟಿ ಯೋಜನೆಯ ಲಾಭವನ್ನು ರಾಜ್ಯದ 1.60 ಕೋಟಿ ಫಲಾನುಭವಿಗಳು ಪಡೆದಿದ್ದಾರೆ. ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.