ಬೆಂಗಳೂರು : ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ ಜಂಗಮರೆಂದು ಹಕ್ಕು ಮಂಡಿಸುತ್ತಿರುವುದರ ಕುರಿತು ನಿನ್ನೆ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ವೀರಶೈವ ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ ಅಥವಾ ‘ಬುಡ್ಗ’ ಜಂಗಮರಲ್ಲ ಎಂದು ತಿಳಿಸಿದೆ.
ಕಲಬುರಗಿ ಪೀಠದಲ್ಲಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ಕಲಬುರಗಿಯ ನ್ಯಾಯಪೀಠವು ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ ಅಥವಾ ಬುಡ್ಗ ಜಂಗಮರೆಂದು ತಿಳಿಸಿ, ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಮೀಸಲು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ವೀರಶೈವರಲ್ಲಿನ ಜಂಗಮರು ಪೂಜಿಸುವ ವರ್ಗದವರು ಮತ್ತು ಅವರು ಸಸ್ಯಾಹಾರಿಗಳು. ಆದರೆ, ಬೇಡ ಜಂಗಮರು ಸಮಾಜದಲ್ಲಿ ಕೆಳ ಜಾತಿಗೆ ಸೇರಿದವರು ಮತ್ತು ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ. ಆದ್ದರಿಂದ ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ ಜಂಗಮರೆಂದು ಹಕ್ಕು ಮಂಡಿಸುತ್ತಿರುವುದರ ಕುರಿತು ಸೂಕ್ಷ್ಮ ಅವಲೋಕನ ನಡೆಸಲಾಗಿದೆ.
ಜಂಗಮ ಲಿಂಗಾಯಿತರನ್ನು ಬೇಡ ಜಂಗಮ ಎಂದು ಪರಿಗಣಿಸಲಾಗದು. ಜಾತಿ ಹೆಸರಿಗೆ ಒಂದೇ ಸಮಾನ ಹೆಸರಿದೆ ಎನ್ನುವ ಕಾರಣಕ್ಕೆ ಆ ಜಾತಿಗಳಿಗೆ ಪರಿಶಿಷ್ಟ ಜಾತಿಗಳ ಸ್ಥಾನಮಾನ ನೀಡಲಾಗದೆಂದು ಸುಪ್ರೀಂ ಕೋರ್ಟ್ ಈಗಾಗಲೇ ಪ್ರಭುದೇವ ಮಲ್ಲಿಕಾರ್ಜುನಯ್ಯ ವರ್ಸಸ್ ರಾಮಚಂದ್ರ ವೀರಪ್ಪ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ.
ಅದರಂತೆ ಕೋರ್ಟ್ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಜಾತಿಯ ವರ್ಗೀಕರಣದಲ್ಲಿ ವ್ಯಾಖ್ಯಾನ ಮಾಡಲು, ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲು ಬಯಸುವುದಿಲ್ಲ. ಬೇಡ ಜಂಗಮ ಅಥವಾ ಬುಡ್ಗ ಜಂಗಮರಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಜಂಗಮರನ್ನು ಸೇರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.