ಮೈಸೂರು : ಮೈಸೂರಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮಿತಿಮೀರಿದ್ದು, ಮನೆ ಮುಂದೆ ನಿಲ್ಲಿಸಿದ ಎರಡು ಕಾರುಗಳಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದಿದ್ದು, ಅಲ್ಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ನಂಜನಗೂಡು ನಗರದ ಶ್ರೀರಾಂಪುರ ಬಡಾವಣೆಯಲ್ಲಿರುವ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್ ಮತ್ತು 5ನೇ ಕ್ರಾಸ್ನಲ್ಲಿರುವ ಸಂತೋಷ್ ಎಂಬುವವರ ಕಾರಿಗೆ ಮಧ್ಯರಾತ್ರಿ ಏಕಕಾಲದಲ್ಲಿ ಪೆಟ್ರೋಲ್ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಹೊತ್ತಿ ಉರಿಯುತ್ತಿದ್ದ ಕಾರನ್ನು ಕಂಡು ಅಕ್ಕಪಕ್ಕದ ನಿವಾಸಿಗಳು ನೀರು ಎರಚಿ ಬೆಂಕಿಯನ್ನು ನಂದಿಸಿ ಅನಾಹುತ ತಪ್ಪಿಸಿದ್ದಾರೆ. ಕಾರುಗಳಿಗೆ ಬೆಂಕಿ ಹಾಕಿದ ಪರಿಣಾಮ ಸುಟ್ಟು ಕರಕಲಾಗಿವೆ.
ನಂಜನಗೂಡಿನಲ್ಲಿ ಬೀಟ್ ಪೊಲೀಸ್ ಇಲ್ಲದೇ ಇಂತಹ ಘಟನೆಗಳು ನಡೆಯುತ್ತಿವೆ. ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ದುಷ್ಕರ್ಮಿಗಳ ಹೆಡೆಮುರಿ ಕಟ್ಟಬೇಕಿದೆ. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.








