ದಾವಣಗೆರೆ : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದನ್ನು ಖಂಡಿಸಿ ಇಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಪ್ರತಿಭಟನೆಯ ಬಿಸಿ ಕಾವೇರಿದೆ.
ಬೆಂಗಳೂರು, ಮೈಸೂರು, ಚಿಕ್ಕಮಂಗಳೂರು, ಮಂಡ್ಯ ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಜೋರಾಗಿದೆ ಇನ್ನು ದಾವಣಗೆರೆಯಲ್ಲಿ ನಡು ರಸ್ತೆಯಲ್ಲಿಯೇ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಯಲ್ಲಮ್ಮ ನಗರ ಬಳಿ ಟೈರ್ಗೆ ಬೆಂಕಿ ಇಟ್ಟಿದ್ದಾರೆ. ಪೊಲೀಸರು ಎಷ್ಟೇ ಕಟ್ಟೆಚ್ಚರ ವಹಿಸಿದರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ.
ಇನ್ನು ಬಲವಂತದ ಬಂಧಗೆ ಯಾವುದೇ ಮೊಲಾಜಿ ಇಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದಾವಣಗೆರೆ ಜಿಲ್ಲಾ ಎಸ್ ಪಿ ಉಮಾ ಪ್ರಶಾಂತ್ ಅವರು ತಿಳಿಸಿದರು.03-04 ಸಂಘಟನೆಗಳು ಈ ಬಂದ್ಗೆ ದಾವಣಗೆರೆಯಲ್ಲಿ ಬೆಂಬಲ ಸೂಚಿಸಿವೆ. ದಾವಣಗೆರೆ ನಗರ ತಾಲೂಕು ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಮಾಡಲಾಗಿದೆ.ಬೆಳಗ್ಗೆ ಐದು ಗಂಟೆಯಿಂದಲೇ ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.
ಯಾವ ಸಂಘಟನೆಗಳು ಇದರಲ್ಲಿ ಭಾಗಿಯಾಗಿವೆಯೋ ಅವುಗಳಿಗೆ ನೋಟಿಸ್ ಕಳುಹಿಸಲಾಗಿದೆ. ಶಾಂತಿಯುತವಾಗಿ ನಡೆಸುತ್ತಿದ್ದರೆ ಯಾವುದೇ ತೊಂದರೆ ಆಗಲ್ಲ, ಬಲವಂತವಾಗಿ ಬಂದ್ ಮಾಡಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ.ಯಲ್ಲಮ್ಮ ನಗರದ ರಿಂಗ್ ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಲಾಗಿದೆ. ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ ಎಂದರು.