ವಿಜಯಪುರ : ವಿಜಯಪುರದಲ್ಲಿ ಬಾಲಕಿಯರ ವಸತಿ ನಿಲಯದಿಂದ ಕೆಬಿಎಸ್ ನಂ.4ಕ್ಕೆ ಬರುವ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ನಗರದ ಕೆಬಿಎಸ್ ನಂಬರ್ 4ರ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ, ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಶಿಕ್ಷಕರಿಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ವಿದ್ಯಾರ್ಥಿನಿಯರೊಂದಿಗೆ ಅಸಭ್ಯ, ಅನುಚಿತವಾಗಿ ವರ್ತಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕ ಜಗದೀಶ ಅಕ್ಕಿ ಹಾಗೂ ಸಹ ಶಿಕ್ಷಕ ಎಂ.ಕೆ.ಪಾಟೀಲ ಅವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ವಿಜಯಪುರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ತಿಳಿಸಿದ್ದಾರೆ.
ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಹಾಗೂ ಸರ್ಕಾರಿ ಮೆಟ್ರಿಕ್ ಪೂರ್ವ ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯದಿಂದ ಕೆಬಿಎಸ್ ನಂ.4ಕ್ಕೆ ಬರುವ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವುದು ಸಾಬೀತಾಗಿದೆ ಈ ಹಿನ್ನೆಲೆ ಇಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ.